ಕೇರಳ ಬ್ಲಾಸ್ಟರ್ಸ್– ಮುಂಬೈ ಸಿಟಿ ಮುಖಾಮುಖಿ ವಾಸ್ಕೊ: ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಬುಧವಾರ ಮುಖಾಮುಖಿಯಾಗಲಿವೆ. ತಿಲಕ್ ಮೈದಾನ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹಣಾಹಣಿಯು ಬಹುತೇಕ ಸೆಮಿಫೈನಲ್‌ ಸ್ಥಾನ ನಿರ್ಧರಿಸಲಿದೆ. ಸದ್ಯ 18 ಪಂದ್ಯಗಳಿಂದ 30 ಪಾಯಿಂಟ್ಸ್ ಕಲೆಹಾಕಿರುವ ಕೇರಳ ತಂಡವು ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಮುಂಬೈ ಇಷ್ಟೇ ಪಂದ್ಯಗಳಿಂದ 31 ಪಾಯಿಂಟ್ಸ್ ಗಳಿಸಿದ್ದು, ನಾಲ್ಕನೇ ಸ್ಥಾನದಲ್ಲಿದೆ. ಕೇರಳ ತಂಡವು ಹೋದ ಪಂದ್ಯದಲ್ಲಿ 3–0ಯಿಂದ ಚೆನ್ನೈಯಿನ್ ಎಫ್‌ಸಿ ತಂಡವನ್ನು ಸೋಲಿಸಿತ್ತು. ಮುಂಬೈ ತಂಡವೂ ಎಫ್‌ಸಿ ಗೋವಾ ಎದುರು ಗೆದ್ದಿತ್ತು. ಕೇರಳ ತಂಡದ ಆ್ಯಡ್ರಿಯನ್ ಲೂನಾ ಅವರು ಈ ಋತುವಿನಲ್ಲಿ ಅದ್ಭುತ ಲಯದಲ್ಲಿದ್ದಾರೆ. ಉರುಗ್ವೆ ಮೂಲದ ಈ ಆಟಗಾರ ಗೋಲು ‘ಅಸಿಸ್ಟ್’ ಮಾಡುವಲ್ಲಿ ಅಹಮದ್‌ ಜಾಹೊ ಮತ್ತು ಗ್ರೆಗ್ ಸ್ಟೀವರ್ಟ್‌ ಅವರೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಆರು ಬಾರಿ ಗೋಲು ಗಳಿಸಲು ಅವರು ನೆರವು ನೀಡಿದ್ದಾರೆ. ಉಭಯ ತಂಡಗಳ ನಡುವೆ ಜಿದ್ದಾಜಿದ್ದಿ ಪೈಪೋಟಿ ನಡೆಯುವ ನಿರೀಕ್ಷೆಯಿದೆ.‌ ಪಂದ್ಯ ಆರಂಭ: ರಾತ್ರಿ 7.30 ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.