ಐಎಸ್‌ಎಲ್‌; ಜೆಮ್ಶೆಡ್‌ಪುರ ಎಫ್‌ಸಿಗೆ ಲೀಗ್ ವಿಜೇತ ಪಟ್ಟ ಫತೋರ್ಡ: ಜಿದ್ದಾಜಿದ್ದಿಯ ಹೋರಾಟದಲ್ಲಿ ಬಲಿಷ್ಠ ಎಟಿಕೆ ಮೋಹನ್ ಬಾಗನ್ ತಂಡ ಸವಾಲು ಮೀರಿದ ಜೆಮ್ಶೆಡ್‌ಪುರ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿಯ ಲೀಗ್ ಹಂತದ ವಿಜೇತ ಪಟ್ಟವನ್ನು ತನ್ನದಾಗಿಸಿಕೊಂಡಿತು. ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮುಖಾಮುಖಿಯಲ್ಲಿ 1–0ಯಿಂದ ಜೆಮ್ಶೆಡ್‌ಪುರ ತಂಡ ಜಯ ಗಳಿಸಿತು. 57ನೇ ನಿಮಿಷದಲ್ಲಿ ಋತ್ವಿಕ್ ದಾಸ್ ಗಳಿಸಿದ ಗೋಲು, ತಂಡಕ್ಕೆ ಗೆಲುವು ತಂದುಕೊಟ್ಟಿತು. ಪಂದ್ಯದ ಆರಂಭಕ್ಕೂ ಮೊದಲು ಲೀಗ್ ವಿಜೇತರಾಗಲು ಎರಡೂ ತಂಡಗಳಿಗೆ ಅವಕಾಶವಿತ್ತು. ಗೆದ್ದ ತಂಡ ಪ್ರಶಸ್ತಿಗೆ ಅರ್ಹವಾಗುತ್ತಿತ್ತು. ಹೀಗಾಗಿ ಆರಂಭದಿಂದಲೇ ಪಂದ್ಯ ರೋಚಕವಾಗಿತ್ತು. ಮೊದಲಾರ್ಧದಲ್ಲಿ ಚೆಂಡನ್ನು ಗುರಿ ಮುಟ್ಟಿಸಲು ಎರಡೂ ತಂಡಗಳು ನಡೆಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ. 57ನೇ ನಿಮಿಷದಲ್ಲಿ ಗ್ರೆಗ್ ಸ್ಟೀವರ್ಟ್‌ ಅವರ ಚಾಕಚಕ್ಯ ಆಟ ಜೆಮ್ಶೆಡ್‌ಪುರ ತಂಡದ ಕೈ ಹಿಡಿಯಿತು. ಎದುರಾಳಿ ತಂಡದ ಡಿಫೆಂಡರ್‌ಗಳನ್ನು ವಂಚಿಸಿ ಎಡಬದಿಗೆ ಚೆಂಡಿನೊಂದಿಗೆ ಮುನ್ನುಗ್ಗಿದ ಅವರು ನಂತರ ಬಲಬದಿಯತ್ತ ಪಾಸ್ ನೀಡಿದರು. ಚೆಂಡು ಋತ್ವಿಕ್‌ ದಾಸ್‌ ಅವರಿಗೆ ಲಭಿಸಿತು. ಗೋಲ್‌ಕೀಪರ್‌ಗೆ ಚಳ್ಳೆಹಣ್ಣು ತಿನ್ನಿಸಿದ ಋತ್ವಿಕ್ ಅವರು ಮೋಹಕವಾಗಿ ಗುರಿ ಸಾಧಿಸಿದರು. ಸೆಮಿಫೈನಲ್ ವೇಳಾಪಟ್ಟಿ ಸೆಮಿಫೈನಲ್1 (ಮೊದಲ ಲೆಗ್‌) ಜೆಮ್ಶೆಡ್‌ಪುರ ಎಫ್‌ಸಿ–ಕೇರಳ ಬ್ಲಾಸ್ಟರ್ಸ್‌ ಮಾರ್ಚ್‌ 11; ಫತೋರ್ಡ ಸೆಮಿಫೈನಲ್‌–2 (ಮೊದಲ ಲೆಗ್‌) ಹೈದರಾಬಾದ್‌ ಎಫ್‌ಸಿ–ಎಟಿಕೆ ಮೋಹನ್ ಬಾಗನ್‌ ಮಾರ್ಚ್‌ 12; ಬ್ಯಾಂಬೊಲಿಮ್ ಸೆಮಿಫೈನಲ್–1 (ಎರಡನೇ ಲೆಗ್‌) ಕೇರಳ ಬ್ಲಾಸ್ಟರ್ಸ್‌–ಜೆಮ್ಶೆಡ್‌ಪುರ ಎಫ್‌ಸಿ ಮಾರ್ಚ್ 15; ವಾಸ್ಕೊ ಸೆಮಿಫೈನಲ್–2 (ಎರಡನೇ ಲೆಗ್‌) ಎಟಿಕೆ ಮೋಹನ್ ಬಾಗನ್–ಹೈದರಾಬಾದ್ ಎಫ್‌ಸಿ ಮಾರ್ಚ್‌ 16; ಬ್ಯಾಂಬೊಲಿಮ್‌ ಪಂದ್ಯಗಳ ಆರಂಭ: ರಾತ್ರಿ 7.30 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.