ಕೇರಳ ಬ್ಲಾಸ್ಟರ್ಸ್‌–ಜೆಮ್ಶೆಡ್‌ಪುರ್ ಎಫ್‌ಸಿ ಮುಖಾಮುಖಿ ಫತೋರ್ಡ, ಗೋವಾ: ಮೊದಲ ಬಾರಿ ಲೀಗ್ ಶೀಲ್ಡ್ ಗೆದ್ದ ಸಂಭ್ರಮದಲ್ಲಿರುವ ಜೆಮ್ಶೆಡ್‌ಪುರ್ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಮೊದಲ ಸೆಮಿಫೈನಲ್‌ನ ಒಂದನೇ ಲೆಗ್‌ನಲ್ಲಿ ಶುಕ್ರವಾರ ಕೇರಳ ಬ್ಲಾಸ್ಟರ್ಸ್ ವಿರುದ್ಧ ಸೆಣಸಲಿದೆ. ಜವಾಹರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ಪಂದ್ಯನಡೆಯಲಿದ್ದು ಬಲಿಷ್ಠ ತಂಡಗಳ ಮುಖಾಮುಖಿ ಕುತೂಹಲಕ್ಕೆ ಕಾರಣವಾಗಿದೆ. 20 ಪಂದ್ಯಗಳಲ್ಲಿ 43 ಪಾಯಿಂಟ್ ಕಲೆ ಹಾಕಿ ಲೀಗ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿರುವ ಜೆಮ್ಶೆಡ್‌ಪುರ್ ಇದೇ ಮೊದಲ ಬಾರಿ ನಾಲ್ಕರ ಘಟ್ಟ ಪ್ರವೇಶಿಸಿದೆ. ಕೇರಳ ಬ್ಲಾಸ್ಟರ್ಸ್‌ಗೆ 2016ರ ನಂತರ ಇದು ಮೊದಲ ಸೆಮಿಫೈನಲ್‌. ಓವೆನ್ ಕೊಯ್ಲೆ ತರಬೇತಿ ನೀಡುತ್ತಿರುವ ಜೆಮ್ಶೆಡ್‌ಪುರ್ ತಂಡ ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದೆ. ತಂಡ ಕೇವಲ ಮೂರು ಪಂದ್ಯಗಳಲ್ಲಿ ಸೋತಿದೆ. ಗ್ರೆಗ್ ಸ್ಟೀವರ್ಟ್ ಅವರು ತಂಡ ಆಧಾರಸ್ತಂಭವಾಗಿದ್ದಾರೆ. ಆಡಿರುವ 19 ಪಂದ್ಯಗಳಲ್ಲಿ ಅವರು 10 ಗೋಲು ಗಳಿಸಿದ್ದು 10 ಗೋಲುಗಳಿಗೆ ಅಸಿಸ್ಟ್ ಮಾಡಿದ್ದಾರೆ. ಸ್ಕಾಟ್ಲೆಂಡ್‌ನ ಈ ಆಟಗಾರ ನಾಕೌಟ್ ಹಂತದಲ್ಲೂ ಇದೇ ರೀತಿಯ ಸಾಮರ್ಥ್ಯ ಮುಂದುವರಿಸುವ ನಿರೀಕ್ಷೆಯಲ್ಲಿದೆ ತಂಡ. ಎಸ್‌ಸಿ ಈಸ್ಟ್ ಬೆಂಗಾಲ್ ತಂಡದಿಂದ ಜನವರಿಯಲ್ಲಿ ಜೆಮ್ಶೆಡ್‌ಪುರ್ ತಂಡಕ್ಕೆ ಬಂದಿರುವ ಡ್ಯಾನಿಯಲ್ ಚಿಮಾ ಚುಕುವು ಕಡಿಮೆ ಅವಧಿಯಲ್ಲಿ ಪರಿಣಾಮ ಬೀರಿದ್ದಾರೆ. ತಂಡಕ್ಕಾಗಿ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಅವರು ಏಳು ಬಾರಿ ಚೆಂಡನ್ನು ಗುರಿ ಮುಟ್ಟಿಸಿದ್ದಾರೆ. ಹಾಲಿ ಚಾಂಪಿಯನ್ ಮುಂಬೈ ಸಿಟಿ ಎಫ್‌ಸಿಯನ್ನು ಮಣಿಸಿ ನಾಲ್ಕರ ಘಟ್ಟಕ್ಕೆ ಕಾಲಿಸಿರುವ ಕೇರಳ ಬ್ಲಾಸ್ಟರ್ಸ್‌ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ತಂಡವೂ ಟೂರ್ನಿಯಲ್ಲಿ ಅಮೋಘ ಸಾಮರ್ಥ್ಯ ತೋರಿದೆ. ಅಲ್ವಾರೊ ವಸ್ಕಿಜ್, ಜಾರ್ಜ್ ಡಯಾಸ್‌, ಅಡ್ರಿಯನ್ ಲೂನಾ ಮತ್ತು ಸಹಲ್ ಅಬ್ದುಲ್ ಸಮದ್ ಮುಂತಾದವರು ತಂಡದ ಭರವಸೆಯಾಗಿದ್ದಾರೆ. ಈ ನಾಲ್ವರು ಟೂರ್ನಿಯಲ್ಲಿ ಒಟ್ಟಾರೆ 26 ಗೋಲುಗಳನ್ನು ಗಳಿಸಿದ್ದಾರೆ. ಲೀಗ್ ಹಂತದಲ್ಲ ಕೊನೆಯದಾಗಿ ಈ ಎರಡು ತಂಡಗಳು ಮುಖಾಮುಖಿಯಾದಾಗ ಕೇರಳ ಬ್ಲಾಸ್ಟರ್ಸ್ ವಿರುದ್ಧ ಜೆಮ್ಶೆಡ್‌ಪುರ್ 3–0ಯಿಂದ ಜಯ ಗಳಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.