ಫುಟ್‌ಬಾಲ್‌: ಬೆಂಗಳೂರು ಅಥ್ಲೆಟಿಕ್ಸ್‌ ಜಯಭೇರಿ ಬೆಂಗಳೂರು: ಕೆ.ಸಿದ್ದೀಕ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ಬೆಂಗಳೂರು ಅಥ್ಲೆಟಿಕ್ಸ್ ಎಫ್‌ಸಿ ತಂಡವು ಕೆಎಸ್‌ಎಫ್‌ಎ ‘ಸಿ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಪಂದ್ಯದಲ್ಲಿ ಜಯ ಗಳಿಸಿತು. ಶುಕ್ರವಾರ ನಡೆದ ದಕ್ಷಿಣ ವಲಯದ ‘ಬಿ‘ ಗುಂಪಿನ ಪಂದ್ಯದಲ್ಲಿಬೆಂಗಳೂರು ಅಥ್ಲೆಟಿಕ್ಸ್ 4–0ಯಿಂದ ಯೂನಿವರ್ಸಲ್ ಬ್ಲ್ಯೂ ತಂಡವನ್ನು ಮಣಿಸಿತು. ಸಿದ್ದೀಕ್ 7 ಮತ್ತು 16ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು. ವಿಜೇತ ತಂಡದ ಪರ ಅಂದನ್ ದಾಸ್‌ (44ನೇ ನಿಮಿಷ) ಮತ್ತು ದೇವಶಿಸ್‌ ದಾಸ್‌ (58ನೇ ನಿ.) ತಲಾ ಒಂದು ಗೋಲು ಹೊಡೆದರು. ಇದೇ ಗುಂಪಿನ ಮತ್ತೊಂದು ಹಣಾಹಣಿಯಲ್ಲಿ ರೇರ್‌ ಡೇರ್‌ ಎಫ್‌ಸಿ 4–0ಯಿಂದ ವಿಪಿಎಸ್‌ ಎಫ್‌ಸಿ ವಿರುದ್ಧ ಜಯಿಸಿತು. ರೇರ್ ಡೇರ್‌ ಪರ ಸುಶೀಲ್‌ (17ನೇ ಮತ್ತು 41ನೇ ನಿ.) ಮತ್ತು ಸರವಣನ್‌ (30ನೇ ಮತ್ತು 50ನೇ ನಿ.) ಮಿಂಚಿದರು. ನಂದು ಮೆಮೊರಿಯಲ್‌ ತಂಡವು ಒಲಿಂಪಿಯನ್‌ ಎಸ್‌.ರಾಮನ್ ತಂಡದೊಂದಿಗೆ ಗೋಲುರಹಿತ ಡ್ರಾ ಸಾಧಿಸಿತು. ಉತ್ತರ ವಲಯದ ‘ಜೆ‘ ಗುಂಪಿನ ಪಂದ್ಯಗಳಲ್ಲಿ ಬಿಪಿಎಸ್‌ಎಸ್‌ ಎಫ್‌ಸಿ 1–0ಯಿಂದ ಬೆಂಗಳೂರು ಏರೋಸ್ ಎಫ್‌ಸಿ ಎದುರು ಜಯಿಸಿದರೆ, ಸತ್ಯ ಎಫ್‌ಸಿ ತಂಡವು ಬ್ರದರ್ಸ್‌ ಎಫ್‌ಸಿಯೊಂದಿಗೆ ಮತ್ತು ಫ್ರೀಲ್ಯಾನ್ಸರ್ ಎಫ್‌ಸಿ– ಸಾಮಂತ್‌ ಎಫ್‌ಸಿಯೊಂದಿಗೆ ಗೋಲುರಹಿತ ಡ್ರಾ ಸಾಧಿಸಿದವು. ಅರುಣ್‌ ಕುಮಾರ್ ಹ್ಯಾಟ್ರಿಕ್: ಅರುಣ್ ಕುಮಾರ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ಬಲದಿಂದ ಬಾಷ್‌ ಎಫ್‌ಸಿ ತಂಡವು ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ (ಬಿಡಿಎಫ್‌ಎ) ’ಸಿ‘ ಡಿವಿಷನ್‌ ಫುಟ್‌ಬಾಲ್‌ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು. ಶುಕ್ರವಾರ ನಡೆದ ಪಂದ್ಯದಲ್ಲಿಬಾಷ್‌ 5–1ರಿಂದ ಯಂಗ್ ಬ್ಲ್ಯೂಸ್ ತಂಡವನ್ನು ಸೋಲಿಸಿತು. ಅರುಣ್‌ ಕುಮಾರ್‌ 6, 15 ಮತ್ತು 50ನೇ ನಿಮಿಷಗಳಲ್ಲಿ ಗೋಲು ಹೊಡೆದರು. ಅರುಣ್ ರಾಯ್‌ (26ನೇ ಮತ್ತು 56ನೇ ನಿ.) ಕೂಡ ಮಿಂಚಿದರು.ಯಂಗ್ ಬ್ಲ್ಯೂಸ್ ಪರ ಮನಾಸ್‌ (10ನೇ ನಿ.) ಒಂದು ಗೋಲು ಹೊಡೆದರು. ಇನ್ನುಳಿದ ಪಂದ್ಯಗಳಲ್ಲಿ ರೇಂಜರ್ಸ್ ಎಫ್‌ಸಿ 6–0ಯಿಂದ ಬೆಂಗಳೂರು ಯಂಗ್‌ಸ್ಟರ್ಸ್ ಎದುರು, ರಬ್ಬಾನಿ ಎಫ್‌ಸಿ 1–0ಯಿಂದ ಎಕ್ಸೆಲ್ಸಿಯರ್ಸ್ ಎದುರು ಜಯಿಸಿದವು. ಮತ್ತೊಂದು ‍ಪಂದ್ಯದಲ್ಲಿ ಬೆಂಗಳೂರು ಬಾಯ್ಸ್‌ ಎಫ್‌ಸಿ–2–2ರಿಂದ ತ್ರಿವೇಣಿ ಎಫ್‌ಸಿಯೊಂದಿಗೆ ಸಮಬಲ ಸಾಧಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.