ಫುಟ್‌ಬಾಲ್: ಅಮೀರ್ ನಾಲ್ಕು ಗೋಲು ಬೆಂಗಳೂರು: ಅಮೀರ್‌ ಪಾಲತ್ತಿಂಗಳ್‌ ಗಳಿಸಿದ ಅಮೋಘ ನಾಲ್ಕು ಗೋಲುಗಳ ಬಲದಿಂದ ಮಿಸಾಕ ಎಫ್‌ಸಿ ತಂಡವು ಬಿಡಿಎಫ್‌ಎ ಸಿ ಡಿವಿಷನ್‌ ಲೀಗ್‌ ಫುಟ್‌ಬಾಲ್ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮಿಸಾಕ 12–0ರಿಂದ ಸರ್ಕಾರಿ ಮುದ್ರಣಾಲಯ ತಂಡವನ್ನು ಪರಾಭವಗೊಳಿಸಿತು. ಅಮೀರ್‌ 19, 24, 33 ಮತ್ತು 45ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು. ಜ್ಯೋತಿಶ್‌ ಎಂ. (4, 6 ಮತ್ತು 14ನೇ ನಿಮಿಷ) ಹಾಗೂ ಸೌರವ್ ಚಾಂದ್‌ (2 ಮತ್ತು 30ನೇ ನಿ.) ಕೂಡ ಮಿಂಚಿದರು. ತಿರುವೆಂಕೊವನ್‌ (37ನೇ ನಿ.), ಸಂದೀಪ್ ನಾಯಕ್‌ (38ನೇ ನಿ.) ಮತ್ತು ಶ್ರೀಕಾಂತ್‌ ನಾಯಕ್‌ (42ನೇ ನಿ.) ವಿಜೇತ ತಂಡದ ಪರ ತಲಾ ಒಂದು ಗೋಲು ಹೊಡೆದರು. ಇನ್ನುಳಿದ ಪಂದ್ಯಗಳಲ್ಲಿ ಆ್ಯಕ್ಟಿವ್‌ ಯುನೈಟೆಡ್‌ ಎಫ್‌ಸಿ 5–0ಯಿಂದ ಬೆಂಗಳೂರು ಬಾಯ್ಸ್‌ ಎದುರು, ಬಾಷ್‌ ಎಫ್‌ಸಿ 6–0ಯಿಂದ ಬೆಂಗಳೂರು ಯಂಗ್‌ಸ್ಟರ್ಸ್‌ ವಿರುದ್ಧ ಗೆದ್ದವು. ಮತ್ತೊಂದು ಪಂದ್ಯದಲ್ಲಿ ಇಂದಿರಾನಗರ ಎಫ್‌ಸಿ 9–0ಯಿಂದ ರೇಂಜರ್ಸ್‌ ಎಫ್‌ಸಿ ತಂಡವನ್ನು ಸೋಲಿಸಿತು. ಮಲ್ಲೇಶ್ವರಂ ಕ್ರೀಡಾಂಗಣದಲ್ಲಿ ನಡೆದ ಕೆಎಸ್‌ಎಫ್‌ಎ ಸಿ ಡಿವಿಷನ್ ಪಂದ್ಯಗಳಲ್ಲಿ ಎಫ್‌ಸಿ ಮಂಗಳೂರು 3–0ಯಿಂದ ಬಾಲಹರ್ಕ ಎಫ್‌ಸಿಯನ್ನು ಲೆಜೆಂಡ್ಸ್ ಡಿ ಸ್ಪೋರ್ಟಿಂಗ್ ಎಫ್‌ಸಿ 1–0ಯಿಂದ ಐಟಿಸಿ ಕಾಲನಿ ಎಫ್‌ಸಿಯನ್ನು ಸೋಲಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.