ಫುಟ್‌ಬಾಲ್‌: ಭಾರತಕ್ಕೆ ಬೆಲಾರೂಸ್ ಸವಾಲು ಮನಾಮ: ಬಹರೇನ್ ವಿರುದ್ಧ ಸೋತಿರುವ ಭಾರತ ಫುಟ್‌ಬಾಲ್ ತಂಡ ಶನಿವಾರ ಬೆಲಾರೂಸ್ ಎದುರು ನಡೆಯಲಿರುವ ಸ್ನೇಹಪರ ಪಂದ್ಯದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದೆ. ತಂಡದಲ್ಲಿ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ ಎಂದು ಕೋಚ್ ಇಗರ್ ಸ್ಟಿಮ್ಯಾಚ್ ಶುಕ್ರವಾರ ಹೇಳಿದ್ದಾರೆ. ಜೂನ್‌ನಲ್ಲಿ ನಡೆಯಲಿರುವ ಏಷ್ಯನ್ ಕಪ್ ಅಂತಿಮ ಸುತ್ತಿನ ಅರ್ಹತಾ ಹಣಾಹಣಿಗೆ ಬಲಿಷ್ಠ ತಂಡವನ್ನು ಕಟ್ಟುವುದು ಸ್ಟಿಮ್ಯಾಚ್ ಅವರ ಉದ್ದೇಶ. ದ್ವಿತೀಯಾರ್ಧದಲ್ಲಿ ರಾಹುಲ್ ಭೆಕೆ ಗಳಿಸಿದ ಗೋಲಿನ ಮೂಲಕ ಬರಹೇನ್ ಎದುರು ಎರಡು ದಿನಗಳ ಹಿಂದೆ ನಡೆದಿದ್ದ ಪಂದ್ಯದಲ್ಲಿ ಭಾರತ ಡ್ರಾದತ್ತ ಹೆಜ್ಜೆ ಹಾಕಿತ್ತು. ಆದರೆ 88ನೇ ನಿಮಿಷದಲ್ಲಿ ಗೋಲು ಬಿಟ್ಟುಕೊಟ್ಟು 1–2ರ ಸೋಲುಂಡಿತ್ತು. ಬೆಲಾರೂಸ್ ಎದುರು ಯುವ ಆಟಗಾರರಿಗೆ ಅವಕಾಶ ನೀಡಲು ಭಾರತ ತಂಡದ ಆಡಳಿತ ನಿರ್ಧರಿಸಿದೆ. ಕೇರಳ ಬ್ಲಾಸ್ಟರ್ಸ್ ತಂಡದಲ್ಲಿ ಆಡಿರುವ 21 ವರ್ಷದ ಡಿಫೆಂಡರ್ ರುಯ್‌ವಾ ಹಾರ್ಮಿಪಮ್‌ ಸ್ಥಾನ ಗಳಿಸುವುದು ಬಹುತೇಕ ಖಚಿತವಾಗಿದೆ. ಪ್ರಭುಶುಖನ್ ಗಿಲ್‌, ಅನ್ವರ್ ಅಲಿ, ರೋಷನ್ ಸಿಂಗ್‌, ವಿ.ಪಿ ಸುಹೇರ್, ಡ್ಯಾನಿಷ್ ಫಾರೂಕ್ ಮತ್ತು ಅನಿಕೇತ್ ಜಾಧವ್ ಅವರಲ್ಲಿ ಕೆಲವರು ತಂಡದಲ್ಲಿ ಸ್ಥಾನ ಗಳಿಸುವ ಸಾಧ್ಯತೆ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.