ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್: ದಾಖಲೆ ಸಮಗಟ್ಟಿದ ಸುನಿಲ್ ಚೆಟ್ರಿ ಬ್ಯಾಂಬೊಲಿಮ್‌: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಎಂಟನೇ ಆವೃತ್ತಿಯಲ್ಲಿ ಮೊದಲ ಗೋಲು ದಾಖಲಿಸಿದ ನಾಯಕ ಸುನಿಲ್ ಚೆಟ್ರಿ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡದ ಸೋಲನ್ನು ತಪ್ಪಿಸಿದರು. ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಬಿಎಫ್‌ಸಿ ಮತ್ತು ಎಫ್‌ಸಿ ಗೋವಾ ನಡುವಿನ ಪಂದ್ಯ 1–1ರಲ್ಲಿ ಡ್ರಾ ಆಯಿತು. ಜಿದ್ದಾಜಿದ್ದಿಯ ಹಣಾಹಣಿಯ 41ನೇ ನಿಮಿಷದಲ್ಲಿ ಡೈಲನ್‌ ಫಾಕ್ಸ್‌ ಗಳಿಸಿದ ಗೋಲಿನೊಂದಿಗೆ ಗೋವಾ ಮುನ್ನಡೆ ಸಾಧಿಸಿತ್ತು. 61ನೇ ನಿಮಿಷದಲ್ಲಿ ಚೆಟ್ರಿ ಚೆಂಡನ್ನು ಗುರಿ ಸೇರಿಸಿ ಸಮಬಲದ ಗೋಲು ತಂದುಕೊಟ್ಟರು. ಇದು ಐಎಸ್‌ಎಲ್‌ನಲ್ಲಿ ಅವರ 48ನೇ ಗೋಲು. ಈ ಮೂಲಕ ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಫೆರಾನ್ ಕೊರೊಮಿನಾಸ್ ದಾಖಲೆಯ ಸಮಗಟ್ಟಿದರು. ಬಲಬದಿಯಲ್ಲಿ ಪ್ರಿನ್ಸ್ ಇಬಾರ ಮೋಹಕ ಆಟವಾಡಿ ಸುನಿಲ್ ಚೆಟ್ರಿಯ ಕಡೆಗೆ ಚೆಂಡನ್ನು ಕ್ರಾಸ್ ಮಾಡಿದರು. ಚೆಟ್ರಿ ಬಲಶಾಲಿಯಾಗಿ ಹೆಡ್‌ ಮಾಡಿ ಗುರಿ ಮುಟ್ಟಿಸಿದರು. ಫತೋರ್ಡದಲ್ಲಿ ರಾತ್ರಿ ನಡೆದ ಎಟಿಕೆ ಮೋಹನ್ ಬಾಗನ್ ಮತ್ತು ಒಡಿಶಾ ಎಫ್‌ಸಿ ನಡುವಿನ ಪಂದ್ಯ ಗೋಲುರಹಿತ ಡ್ರಾದಲ್ಲಿ ಕೊನೆಗೊಂಡಿತು. ಇಂದಿನ ಪಂದ್ಯ ಈಸ್ಟ್ ಬೆಂಗಾಲ್‌–ಹೈದರಾಬಾದ್ ಎಫ್‌ಸಿ ಸ್ಥಳ: ತಿಲಕ್ ಮೈದಾನ್ ಆರಂಭ: ರಾತ್ರಿ 7.30 ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.