ಐಎಸ್‌ಎಲ್‌: 25 ಪಂದ್ಯಗಳಿಗೆ ಪರಿಷ್ಖೃತ ವೇಳಾಪಟ್ಟಿ ಬೆಂಗಳೂರು: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪರಿಷ್ಕೃತ ವೇಳಾಪಟ್ಟಿಯನ್ನು ಆಯೋಜಕರಾದ ಫುಟ್‌ಬಾಲ್‌ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್‌ (ಎಫ್‌ಎಸ್‌ಡಿಎಲ್‌) ಬಿಡುಗಡೆ ಮಾಡಿದೆ. ಈಗ ನಡೆಯುತ್ತಿರುವ ಹಂತದ ಪಂದ್ಯಗಳು ಫೆಬ್ರುವರಿ ಎಂಟರಂದು ಮುಗಿಯಲಿವೆ. ಒಂಬತ್ತರಿಂದ ಕೊನೆಯ ಹಂತ ಆರಂಭವಾಗಲಿದ್ದು 25 ಪಂದ್ಯಗಳು ನಡೆಯಲಿವೆ. ಕೋವಿಡ್‌ನಿಂದಾಗಿ ಜನವರಿಯಲ್ಲಿ ಮುಂದೂಡಲಾದ ಪಂದ್ಯಗಳಿಗೆ ಈ ಅವಧಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಈ ಆವೃತ್ತಿಯ ಲೀಗ್ ಹಂತದ ಕೊನೆಯ ಪಂದ್ಯ ಮಾರ್ಚ್‌ ಏಳರಂದು ನಡೆಯಲಿದೆ. ಎಟಿಕೆ ಮೋಹನ್ ಬಾಗನ್ ಮತ್ತು ಜೆಮ್ಶೆಡ್‌ಪುರ ಎಫ್‌ಸಿ ತಂಡಗಳು ಫತೋರ್ಡದಲ್ಲಿ ಮುಖಾಮುಖಿಯಾಗಲಿವೆ. ಎಲ್ಲ ಶನಿವಾರಗಳಲ್ಲೂ ಹೆಚ್ಚುವರಿ ಡಬಲ್ ಹೆಡರ್‌ (ಎರಡು ಪಂದ್ಯಗಳು) ನಡೆಯಲಿವೆ. ಫೆಬ್ರುವರಿ 19, 26 ಮತ್ತು ಮಾರ್ಚ್ 5ರಂದು ಈ ಪಂದ್ಯಗಳು ನಡೆಯಲಿವೆ. ಲೀಗ್‌ ಹಂತದಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡಕ್ಕೆ ಇನ್ನು ಆರು ಪಂದ್ಯಗಳು ಇದ್ದು ಈ ಪೈಕಿ ಐದು ಪಂದ್ಯಗಳು ಪರಿಷ್ಕೃತ ವೇಳಾಪಟ್ಟಿಯಲ್ಲಿ ನಡೆಯಲಿವೆ. ಮುಂಬೈಗೆ ಎಟಿಕೆಎಂಬಿ ಎದುರಾಳಿ‌ ಫತೋರ್ಡದಲ್ಲಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಸೆಣಸಲಿವೆ. ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸಲು ಎಟಿಕೆ ಎಂಬಿ ಈ ಪಂದ್ಯದಲ್ಲಿ ಪ್ರಯತ್ನಿಸಲಿದ್ದು ಎಲ್ಲರ ಕಣ್ಣು ಕಿಯಾನ್ ನಾಸಿರಿ ಮೇಲಿದೆ. ಎಸ್‌ಸಿ ಈಸ್ಟ್ ಬೆಂಗಾಲ್ ಎದುರಿನ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧಿಸಿದ ನಾಸಿರಿ ಐಎಸ್‌ಎಲ್‌ನಲ್ಲಿ ಈ ಸಾಧನೆ ಮಾಡಿದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಎಟಿಕೆೆೆೆಎಂಬಿ ಇತಿಹಾಸದಲ್ಲಿ ತಂಡಕ್ಕಾಗಿ ಗೋಲು ಗಳಿಸಿದ ಅತಿ ಕಿರಿಯ ಆಟಗಾರ ಎಂಬ ಶ್ರೇಯಸ್ಸು ಕೂಡ ಅವರದಾಗಿದೆ. ಬದಲಿ ಆಟಗಾರನಾಗಿ ಬಂದು ಐಎಸ್‌ಎಲ್‌ನಲ್ಲಿ ಹ್ಯಾಟ್ರಿಕ್ ಗಳಿಸಿದ ಮೊದಲ ಆಟಗಾರ ಕೂಡ ಆಗಿದ್ದಾರೆ. ಆರಂಭದಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ಮುಂಬೈ ತಂಡ ನಂತರ ಮಂಕಾಗಿದೆ. ಹಿಂದಿನ ಆರು ಪಂದ್ಯಗಳಲ್ಲಿ ತಂಡ ಜಯ ಕಂಡಿಲ್ಲ. 12 ಪಂದ್ಯಗಳಿಂದ ಈ ವರೆಗೆ 18 ಪಾಯಿಂಟ್ ಮಾತ್ರ ಕಲೆ ಹಾಕಿದೆ. ಹಿಂದಿನ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾದಾಗ ಮುಂಬೈ 5–1ರಲ್ಲಿ ಜಯ ಗಳಿಸಿತ್ತು. ಅಡಿಡಾಸ್ ಜೊತೆ ಸಂದೇಶ್ ಒಪ್ಪಂದ ಭಾರತ ತಂಡದ ಸಂದೇಶ್ ಜಿಂಗಾನ್ ಅವರು ಕ್ರೀಡಾ ಉಡುಪುಗಳ ತಯಾರಿಕೆ ಸಂಸ್ಥೆ ಅಡಿಡಾಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಐಎಸ್‌ಎಲ್‌ನಲ್ಲಿ ಎಟಿಕೆ ಮೋಹನ್ ಬಾಗನ್ ತಂಡದ ಜೊತೆ ಇರುವ ಸಂದೇಶ್ ಯುವ ಆಟಗಾರರನ್ನು ಪ್ರೋತ್ಸಾಹಿಸುವ ಕಾರ್ಯದಲ್ಲಿ ಅಡಿಡಾಸ್ ಜೊತೆ ಕೈಜೋಡಿಸಲಿದ್ದಾರೆ. ‘ಫುಟ್‌ಬಾಲ್ ಕ್ರೀಡೆಯ ಜೊತೆ ನನ್ನ ಪ್ರಯಾಣ ಅತ್ಯಂತ ಖುಷಿಯಿಂದ ಕೂಡಿದೆ. ಭಾರತದಲ್ಲಿ ಈ ಕ್ರೀಡೆಯನ್ನು ಉನ್ನತ ಮಟ್ಟಕ್ಕೆ ತಲುಪಿಸಲು ನಾನು ಕಾತರನಾಗಿದ್ದೇನೆ. ಫುಟ್‌ಬಾಲ್ ಬಗ್ಗೆ ನನಗಿರುವ ಆಸಕ್ತಿಯನ್ನು ಮನಗಂಡಿರುವ ಅಡಿಡಾಸ್ ಈ ಅವಕಾಶ ನೀಡಿದೆ’ ಎಂದು ಸಂದೇಶ್ ಹೇಳಿದ್ದಾರೆ. ಪರಿಷ್ಕೃತ ವೇಳಾಪಟ್ಟಿಯಲ್ಲಿ ಬಿಎಫ್‌ಸಿ ಪಂದ್ಯಗಳು ದಿನಾಂಕ;ಎದುರಾಳಿ;ಸ್ಥಳ ಫೆ.11;ಎಚ್‌ಎಫ್‌ಸಿ;ಬ್ಯಾಂಬೊಲಿಮ್‌ ಫೆ.18;ನಾರ್ತ್‌ಈಸ್ಟ್‌;ಫತೋರ್ಡ್‌ ಫೆ.21;ಒಎಫ್‌ಸಿ;ಬ್ಯಾಂಬೊಲಿಮ್‌ ಫೆ.27;ಎಟಿಕೆಎಂಭಿ;ಫತೋರ್ಡ ಮಾ.5;ಎಸ್‌ಸಿಇಬಿ;ವಾಸ್ಕೊ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.