ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್: ಚೆಟ್ರಿ ಕಾಲ್ಚಳಕ; ಬಿಎಫ್‌ಸಿಗೆ ಜಯ ಬ್ಯಾಂಬೊಲಿಮ್‌:ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡದ ನಾಯಕ ಸುನಿಲ್ ಚೆಟ್ರಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಅತಿಹೆಚ್ಚು ಗೋಲು ಗಳಿಸಿದವರ ದಾಖಲೆ ಸಮಗಟ್ಟಿದರು. ಅವರೊಂದಿಗೆ ಮಿಂಚಿದ ಕ್ಲೀಟನ್ ಸಿಲ್ವಾ ಎರಡು ಗೋಲು ಗಳಿಸಿದರು. ಇವರಿಬ್ಬರ ಅಮೋಘ ಆಟದ ನೆರವಿನಿಂದ ತಂಡ ಭರ್ಜರಿ ಜಯ ಗಳಿಸಿತು. ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಜೆಮ್ಶೆಡ್‌ಪುರ ಎಫ್‌ಸಿ (ಜೆಎಫ್‌ಸಿ) ತಂಡವನ್ನು ಬಿಎಫ್‌ಸಿ 3–1ರಿಂದ ಮಣಿಸಿತು. ಮೊದಲ ನಿಮಿಷದಲ್ಲೇ ಚುಕ್ವು ಗೋಲು ಗಳಿಸಿ ಜೆಎಫ್‌ಸಿಗೆ ಮುನ್ನಡೆ ಗಳಿಸಿಕೊಟ್ಟಿದ್ದರು. ದ್ವಿತೀಯಾರ್ಧದಲ್ಲಿ (55ನೇ ನಿ) ಸುನಿಲ್ ಚೆಟ್ರಿ ಚೆಂಡನ್ನು ಗುರಿಸೇರಿಸಿದರು. ಇದು ಟೂರ್ನಿಯಲ್ಲಿ ಅವರು ಗಳಿಸಿದ 49ನೇ ಗೋಲು. ಈ ಮೂಲಕ ಹೈದರಾಬಾದ್ ಎಫ್‌ಸಿಯ ಬಾರ್ತೊಲೊಮೆ ಒಗ್ಬೆಚೆ ಅವರ ದಾಖಲೆ ಸಮಗಟ್ಟಿದರು. 62 ಮತ್ತು 90ನೇ ನಿಮಿಷದಲ್ಲಿ ಕ್ಲೀಟನ್ ಗೋಲು ಗಳಿಸಿ ತಂಡಕ್ಕೆ ಜಯದ ಕಾಣಿಕೆ ನೀಡಿದರು. ಈ ಜಯದೊಂದಿಗೆ ಬಿಎಫ್‌ಸಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು. ಚೆನ್ನೈಯಿನ್‌–ಮುಂಬೈ ಮುಖಾಮುಖಿ ಫತೋರ್ಡದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಚೆನ್ನೈಯಿನ್‌ ಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಗಳು ಮುಖಾಮುಖಿಯಾಗಲಿವೆ. ಹಿಂದಿನ ಪಂದ್ಯದಲ್ಲಿ ಚೆನ್ನೈಯಿನ್‌ ಎಫ್‌ಸಿ ತಂಡ ಪಾಯಿಂಟ್‌ ಪಟ್ಟಿಯ ಕೊನೆಯ ಸ್ಥಾನದಲ್ಲಿರುವ ಎಸ್‌ಸಿ ಈಸ್ಟ್ ಬೆಂಗಾಲ್ ಎದುರು 2–2ರ ಡ್ರಾ ಮಾಡಿಕೊಂಡಿತ್ತು. ಇದರಿಂದಾಗಿ ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸುವ ಅವಕಾಶವನ್ನು ಕಳೆದುಕೊಂಡಿತ್ತು. ತಂಡದ ಖಾತೆಯಲ್ಲಿ ಈಗ 19 ಪಾಯಿಂಟ್‌ಗಳು ಇವೆ. 14 ಪಂದ್ಯಗಳನ್ನು ತಂಡ ಆಡಿದೆ. ಮುಂಬೈ ಸಿಟಿ ಎಫ್‌ಸಿ ಕೂಡ ಈ ಬಾರಿ ನಿರಾಶೆ ಅನುಭವಿಸಿದೆ. 13 ಪಂದ್ಯಗಳ ಪೈಕಿ ಐದನ್ನು ಮಾತ್ರ ಗೆದ್ದಿರುವ ತಂಡದ ಬಳಿ 19 ಪಾಯಿಂಟ್‌ಗಳು ಇವೆ. ಚೆನ್ನೈಯಿನ್ ಎಫ್‌ಸಿಯಲ್ಲಿದ್ದ ಲಾಲಿಯನ್‌ಜ್ವಾಲ ಚಾಂಗ್ಟೆ ಜನವರಿಯಲ್ಲಿ ಆದ ಬದಲಾವಣೆಯ ಭಾಗವಾಗಿ ಈಗ ಮುಂಬೈ ತಂಡದಲ್ಲಿದ್ದಾರೆ. ಎಟಿಕೆ ಮೋಹನ್ ಬಾಗನ್ ಎದುರಿನ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಆಡಿದ್ದರು. ಚೆನ್ನೈಯಿನ್‌ ತಂಡದಲ್ಲಿ 53 ಪಂದ್ಯಗಳನ್ನು ಆಡಿರುವ ಅವರು 12 ಗೋಲುಗಳನ್ನು ಗಳಿಸಿದ್ದು ಎರಡು ಗೋಲುಗಳಿಗೆ ಅಸಿಸ್ಟ್ ಮಾಡಿದ್ದಾರೆ. ಚೆನ್ನೈಯಿನ್‌ ತಂಡದ ನೆರಿಜಸ್ ವಲ್‌ಸ್ಕಿಸ್‌ ಅವರು ವೈಯಕ್ತಿಕ 50ನೇ ಪಂದ್ಯ ಆಡಲು ಸಜ್ಜಾಗುತ್ತಿದ್ದಾರೆ. ಭಾನುವಾರದ ಪಂದ್ಯದಲ್ಲಿ ಗೆದ್ದರೆ ಅದು ಐಎಸ್‌ಎಲ್‌ನಲ್ಲಿ ಚೆನ್ನೈಯಿನ್ ತಂಡದ 50ನೇ ಜಯ ಆಗಲಿದೆ. ಈ ಆವೃತ್ತಿಯಲ್ಲಿ ವಲ್‌ಸ್ಕಿಸ್‌ ಎರಡು ಗೋಲು ಮಾತ್ರ ಗಳಿಸಿದ್ದಾರೆ. ಅವೆರಡೂ ಎಫ್‌ಸಿ ಗೋವಾ ಎದುರಿನ ಪಂದ್ಯದಲ್ಲಿ ಬಂದಿದ್ದವು. ಆ ಗೋಲುಗಳನ್ನು ಬಿಟ್ಟರೆ, ಕಳೆದ 15 ಪಂದ್ಯಗಳಲ್ಲಿ ಅವರಿಗೆ ಚೆಂಡನ್ನು ಗುರಿ ಮುಟ್ಟಿಸಲು ಆಗಲಿಲ್ಲ. ಹಾಲಿ ಚಾಂಪಿಯನ್ ಮುಂಬೈ ಕಳೆದ ಏಳು ಪಂದ್ಯಗಳಲ್ಲಿ ಜಯ ಕಾಣಲಿಲ್ಲ. ಈ ಆವೃತ್ತಿಯ ಆರಂಭದ ಕೆಲವು ಪಂದ್ಯಗಳಲ್ಲಿ ಆಕ್ರಮಣ ವಿಭಾಗದಲ್ಲಿ ಭರ್ಜರಿ ಆಟವಾಡಿದ್ದ ತಂಡ ಈಗ ಸಪ್ಪೆಯಾಗಿದೆ. ರಕ್ಷಣಾ ವಿಭಾಗವೂ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ತಂಡ ಈ ವರೆಗೆ 22 ಗೋಲುಗಳನ್ನು ಬಿಟ್ಟುಕೊಟ್ಟಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.