ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿ: ಗೋವಾ ಜಯಭೇರಿ-ಚೆನ್ನೈಯಿನ್‌ಗೆ ನಿರಾಶೆ ವಾಸ್ಕೊ: ಅತ್ಯಮೋಘ ಆಟದ ಮೂಲಕ ಚೆನ್ನೈಯಿನ್ ಎಫ್‌ಸಿಯನ್ನು ಮಣಿಸಿದ ಎಫ್‌ಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿತು. ತಿಲಕ್ ಮೈದಾನ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಎಫ್‌ಸಿ ಗೊವಾ 5–0ಯಿಂದ ಜಯ ಗಳಿಸಿತು. ಜಾರ್ಜ್ ಒರ್ಟಿಜ್ ಗಳಿಸಿದ ಹ್ಯಾಟ್ರಿಕ್‌ ಮತ್ತು ಎದುರಾಳಿ ತಂಡದ ನಾರಾಯಣ್ ದಾಸ್ ನೀಡಿದ ಉಡುಗೊರೆ ಗೋಲು ಗೋವಾಗೆ ನೆರವಾಯಿತು. ಈ ಜಯದೊಂದಿಗೆ ತಂಡದ ಪ್ಲೇ ಆಫ್‌ ಕನಸು ಜೀವಂತವಾಗಿ ಉಳಿಯಿತು. ಆರನೇ ನಿಮಿಷದಲ್ಲಿ ಮಕಾನ್ ಛೋಟೆ ಗಳಿಸಿದ ಗೋಲಿನೊಂದಿಗೆ ಗೋವಾ ಮುನ್ನಡೆ ಗಳಿಸಿತು. 20, 41 ಮತ್ತು 53ನೇ ನಿಮಿಷಗಳಲ್ಲಿ ಒರ್ಟಿಜ್ ಚೆಂಡನ್ನು ಗುರಿ ಮುಟ್ಟಿಸಿದರು. ಈ ನಡುವೆ ನಾರಾಯಣ್ ದಾಸ್ 45ನೇ ನಿಮಿಷದಲ್ಲಿ ತಮ್ಮದೇ ತಂಡದ ಗೋಲುಪೆಟ್ಟಿಗೆಯೊಳಗೆ ಚೆಂಡನ್ನು ಸೇರಿಸಿ ಕೈಸುಟ್ಟುಕೊಂಡರು. ಇದು ಚೆನ್ನೈಯಿನ್‌ನ ಸಂಕಷ್ಟವನ್ನು ಹೆಚ್ಚಿಸಿತು. ಹಿಂದಿನ ಐದು ಪಂದ್ಯಗಳಲ್ಲಿ ಜಯ ಕಾಣದೇ ಇದ್ದ ಗೋವಾಗೆ ಈ ಜಯ ಚೇತನ ತುಂಬಿದ್ದು 16 ಪಂದ್ಯಗಳಲ್ಲಿ 18 ಪಾಯಿಂಟ್‌ಗಳೊಂದಿಗೆ ಒಂಬತ್ತನೇ ಸ್ಥಾನಕ್ಕೇರಿತು. ಬ್ಲಾಸ್ಟರ್ಸ್‌–ಜೆಮ್ಶೆಡ್‌ಪುರ್‌ ಹಣಾಹಣಿ ಅಗ್ರ ನಾಲ್ಕರಲ್ಲಿ ಗಳಿಸಿರು ಸ್ಥಾನ ಭದ್ರಪಡಿಸುವ ಭರವಸೆಯಲ್ಲಿರುವ ಕೇರಳ ಬ್ಲಾಸ್ಟರ್ಸ್ ಮತ್ತು ನಾಕೌಟ್‌ ಹಂತದ ಕನಸು ಕಾಣುತ್ತಿರುವ ಜೆಮ್ಶೆಡ್‌ಪುರ್ ಎಫ್‌ಸಿ ತಂಡಗಳು ಬ್ಯಾಂಬೊಲಿಮ್‌ನಲ್ಲಿ ಗುರುವಾರ ಮುಖಾಮುಖಿಯಾಗಲಿವೆ. ಸತತ ಮೂರು ಪಂದ್ಯಗಳಲ್ಲಿ ಜಯ ಗಳಿಸಿದ್ದ ಜೆಮ್ಶೆಡ್‌ಪುರ್ ಹಿಂದಿನ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ವಿರುದ್ಧ ಸೋತು ನಿರಾಶೆಗೆ ಒಳಗಾಗಿದೆ. 13 ಪಂದ್ಯಗಳಲ್ಲಿ 22 ಪಾಯಿಂಟ್ ಕಲೆ ಹಾಕಿರುವ ತಂಡ ಐದನೇ ಸ್ಥಾನದಲ್ಲಿದ್ದರೆ 13 ಪಂದ್ಯಗಳಲ್ಲಿ 23 ಪಾಯಿಂಟ್ ಗಳಿಸಿರುವ ಕೇರಳ ಎರಡನೇ ಸ್ಥಾನದಲ್ಲಿದೆ. ಹಿಂದಿನ ಬಾರಿ ಇವೆರಡು ತಂಡಗಳು ಮುಖಾಮುಖಿಯಾಗಿದ್ದಾಗ ಪಂದ್ಯ 1–1ರಲ್ಲಿ ಡ್ರಾ ಆಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.