ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಬಿಎಫ್‌ಸಿಗೆ ಅಗ್ರಸ್ಥಾನದ ಮೇಲೆ ಕಣ್ಣು ಬ್ಯಾಂಬೊಲಿಮ್‌: ಇಂಡಿಯನ್ ಸೂಪರ್‌ ಲೀಗ್ (ಐಎಸ್‌ಎಲ್) ಫುಟ್‌ಬಾಲ್‌ ಟೂರ್ನಿಯ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ತವಕದಲ್ಲಿರುವ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತಂಡವು ಶುಕ್ರವಾರ ಹೈದರಾಬಾದ್‌ ಎಫ್‌ಸಿಗೆ ಮುಖಾಮುಖಿಯಾಗಲಿದೆ. ಟೂರ್ನಿಯಲ್ಲಿ ನೀರಸ ಆರಂಭ ಮಾಡಿದ್ದ ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್‌ಸಿ ಸದ್ಯ ಸತತ ಒಂಬತ್ತು ಪಂದ್ಯಗಳಲ್ಲಿ ಅಜೇಯವಾಗಿದ್ದು, ಲಯಕ್ಕೆ ಮರಳಿದೆ. ತಂಡವು 15 ಪಂದ್ಯಗಳಿಂದ 23 ಪಾಯಿಂಟ್ಸ್ ಕಲೆಹಾಕಿ ಮೂರನೇ ಸ್ಥಾನದಲ್ಲಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹೈದರಾಬಾದ್‌ ಎದುರು ಗೆದ್ದರೆ ಉಭಯ ತಂಡಗಳ ಪಾಯಿಂಟ್ಸ್ ಸಮಬಲವಾಗಲಿವೆ. ಈ ಪಂದ್ಯವು ಸುನಿಲ್ ಚೆಟ್ರಿ ಮತ್ತು ಹೈದರಾಬಾದ್‌ ಬಾರ್ತೊಲೊಮಿವ್ ಒಗ್ಬೆಚೆ ನಡುವಣ ಹಣಾಹಣಿ ಎಂದೇ ಬಿಂಬಿತವಾಗುತ್ತಿದೆ. ಐಎಸ್‌ಎಲ್‌ನಲ್ಲಿ ಇವರಿಬ್ಬರು ತಲಾ 49 ಗೋಲು ಗಳಿಸಿದ್ದು, ಐವತ್ತರ ಗಡಿಗೆ ಸಮೀಪಿಸಿದ್ದಾರೆ. ಚೆಟ್ರಿ 109 ಪಂದ್ಯಗಳಿಂದ ಇಷ್ಟು ಗೋಲು ದಾಖಲಿಸಿದ್ದರೆ, ಒಗ್ಬೆಚೆ 71 ಪಂದ್ಯಗಳಲ್ಲಿ ಚೆಂಡನ್ನು ಗುರಿ ಸೇರಿಸಿದ್ದಾರೆ. ಕಳೆದ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ಎದುರು ಎಡವಿದ್ದ ಹೈದರಾಬಾದ್‌ ಅಗ್ರಸ್ಥಾನ ಭದ್ರಪಡಿಸಿಕೊಳ್ಳುವ ಅವಕಾಶ ಕಳೆದುಕೊಂಡಿತ್ತು. ಈ ಪಂದ್ಯದಲ್ಲಿ ಆ ಗುರಿಯನ್ನು ಈಡೇರಿಸಿಕೊಳ್ಳುವ ಛಲದಲ್ಲಿದೆ. ಮುಖಾಮುಖಿ ಪಂದ್ಯಗಳು 5 ಬಿಎಫ್‌ಸಿ ಜಯ 1 ಹೈದರಾಬಾದ್ ಜಯ 1 ಟೈ 3 ಮುಖಾಮುಖಿಯಲ್ಲಿ ಗೋಲು ಬಿಎಫ್‌ಸಿ 4 ಹೈದರಾಬಾದ್‌ 4 ಪಂದ್ಯ ಆರಂಭ: ರಾತ್ರಿ 7.30 ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.