ಫುಟ್‌ಬಾಲ್‌: ಹಿರಿಯ ಆಟಗಾರ ಪಾಪಣ್ಣ ನಿಧನ ಮೈಸೂರು: ಅಂತರರಾಷ್ಟ್ರೀಯ ಫುಟ್‌ಬಾಲ್‌ ಆಟಗಾರ ಮೈಸೂರು ಎನ್‌.ಪಾಪಣ್ಣ (78) ವಿದ್ಯಾರಣ್ಯಪುರಂನ ತಮ್ಮ ನಿವಾಸದಲ್ಲಿ ಭಾನುವಾರ ನಿಧನರಾದರು. ಅವರಿಗೆ ಪತ್ನಿ ಇದ್ದಾರೆ. ವಿದ್ಯಾರಣ್ಯಪುರಂನ ರುದ್ರಭೂಮಿಯಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿತು. ಹಿಂದಿನ ಮೈಸೂರು ರಾಜ್ಯ ತಂಡ, ರಾಷ್ಟ್ರೀಯ ತಂಡ ಹಾಗೂ ಕೋಲ್ಕತ್ತದ ಮೊಹಮ್ಮದನ್‌ ಸ್ಪೋರ್ಟಿಂಗ್ ತಂಡಗಳನ್ನು ಅವರು ಪ್ರತಿನಿಧಿಸಿದ್ದಾರೆ. 1968ರಲ್ಲಿ ಕ್ವಾಲಾಲಂಪುರದಲ್ಲಿ ನಡೆದಿದ್ದ ಮೆರ್ಡೆಕಾ ಕಪ್‌ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಆಡಿದ್ದರು.ಅಲಹಾಬಾದ್‌ನಲ್ಲಿ ನಡೆದಿದ್ದ ಚೊಚ್ಚಲ ರಾಷ್ಟ್ರೀಯ ಜೂನಿಯರ್ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಮೈಸೂರು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ಸಂತೋಷ್‌ ಟ್ರೋಫಿ, ಡುರಾಂಡ್‌ ಕಪ್‌, ರೋವರ್ಸ್‌ ಕಪ್, ಡಿಸಿಎಂ ಟ್ರೋಫಿ ಮತ್ತು ಐಎಫ್‌ಎ ಶೀಲ್ಡ್‌ ಟೂರ್ನಿಗಳಲ್ಲಿ ಮೊಹಮ್ಮಡನ್‌ ಕ್ಲಬ್‌ ಪರ ಆಡಿದ್ದರು. ಹೆಡರ್‌ ಮೂಲಕ ಗೋಲು ಗಳಿಸುವುದರಲ್ಲಿ ಪಳಗಿದ್ದ ಅವರು, ಮೈಸೂರಿನಲ್ಲಿ ಐಡಿಯಲ್‌ ಜಾವಾ ಫ್ಯಾಕ್ಟರಿ ತಂಡಗಳನ್ನು ಪ್ರತಿನಿಧಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.