ಎಎಫ್‌ಸಿ ಮಹಿಳಾ ಏಷ್ಯಾಕಪ್‌: ಚೀನಾ ಫೈನಲ್‌ಗೆ ಪುಣೆ: ಎರಡು ಬಾರಿಯ ಚಾಂಪಿಯನ್‌ ಜಪಾನ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿದ ಚೀನಾ ಎಎಫ್‌ಸಿ ಮಹಿಳೆಯರ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಯ ಫೈನಲ್ ಪ್ರವೇಶಿಸಿತು. ಪ್ರಶಸ್ತಿ ಸುತ್ತಿನಲ್ಲಿ ಅದು ಕೊರಿಯಾವನ್ನು ಎದುರಿಸಲಿದೆ. ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೋಲು ಗಳಿಸಿ ಸಮಬಲ ಸಾಧಿಸಿದ್ದವು. ಹೀಗಾಗಿ ಹೆಚ್ಚುವರಿ ಅವಧಿಗೆ ಮೊರೆಹೋಗಬೇಕಾಯಿತು. ಈ ಅವಧಿಯಲ್ಲೂ ಎರಡೂ ತಂಡಗಳು ತಲಾ ಒಂದೊಂದು ಗೋಲು ಗಳಿಸಿದವು. ಪಂದ್ಯ 2–2ರಲ್ಲಿ ಸಮ ಆದ ಕಾರಣ ಪೆನಾಲ್ಟಿ ಶೂಟೌಟ್ ಮೊರೆಹೋಗಲಾಯಿತು. ಚೀನಾ 4–3ರಲ್ಲಿ ಜಯ ಗಳಿಸಿತು. ಸತತ ಏಳು ಬಾರಿ ಚೀನಾ ಪ್ರಶಸ್ತಿ ಗೆದ್ದುಕೊಂಡಿತ್ತು. 2006ರಲ್ಲಿ ಮತ್ತೊಮ್ಮೆ ಚಾಂಪಿಯನ್ ಆಗಿತ್ತು. ಜಪಾನ್ 2014 ಹಾಗೂ 2018ರಲ್ಲಿ ಪ್ರಶಸ್ತಿ ಗಳಿಸಿತ್ತು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯೊಂದಿಗೆ ಈ ಬಾರಿ ಕಣಕ್ಕೆ ಇಳಿದಿತ್ತು. ಆರಂಭದಿಂದಲೇ ಹೋರಾಟಕಾರಿ ಆಟವಾಡಿದರೂ ಲಭಿಸಿದ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಲು ತಂಡಕ್ಕೆ ಸಾಧ್ಯವಾಗಲಿಲ್ಲ. ಮತ್ತೊಂದು ಸೆಮಿಫೈನಲ್‌ನಲ್ಲಿ ಕೊರಿಯಾ 2–0ಯಿಂದ ಫಿಲಿಪ್ಪೀನ್ಸ್ ವಿರುದ್ಧ ಜಯ ಗಳಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.