ದೇಶದಲ್ಲಿ ಫುಟ್‌ಬಾಲ್‌ ಒಲವು ಅಪಾರ: ಜೋಸ್‌ ಆಂಟೊನಿಯೊ ಸ್ಯಾಚಾಜಾ ಬೆಂಗಳೂರು: ಭಾರತದಲ್ಲಿ ಫುಟ್‌ಬಾಲ್ ಕುರಿತು ಹೆಚ್ಚಿನ ಒಲವು ಇದೆ. ನಿರೀಕ್ಷೆಗೂ ಮೀರಿ ಇಲ್ಲಿಯ ಕ್ರೀಡಾಭಿಮಾನಿಗಳು ನಮಗೆ ಸ್ಪಂದಿಸುತ್ತಿದ್ದಾರೆ ಎಂದು ಲಾಲಿಲಾ ಫುಟ್‌ಬಾಲ್ ಸಂಸ್ಥೆಯ ಭಾರತ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಜೋಸ್‌ ಆಂಟೊನಿಯೊ ಸ್ಯಾಚಾಜಾ ಹೇಳಿದ್ದಾರೆ. ಲಾಲಿಗಾ ಫುಟ್‌ಬಾಲ್ ಸಂಸ್ಥೆಯು ದೇಶದಲ್ಲಿ ಪದಾರ್ಪಣೆ ಮಾಡಿ ಐದು ವರ್ಷಗಳು ಕಳೆದಿವೆ. ಈ ಸಂಭ್ರಮಾಚರಣೆಗಾಗಿ ಉದ್ಯಾನನಗರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಮೊದಲ ಆವೃತ್ತಿಯ ‘ಲಾಲಿಗಾ ಎಕ್ಸ್‌ಟ್ರಾ ಟೈಮ್‌ ಇಂಡಿಯಾ‘ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘2017ರಲ್ಲಿ ನಮ್ಮ ಮೊದಲ ಕಚೇರಿ ಭಾರತದಲ್ಲಿ ಆರಂಭವಾಯಿತು. ಅಂದಿನಿಂದ ದೇಶದಲ್ಲಿ ಅಭಿಮಾನಿಗಳು ಹೆಚ್ಚಿನ ಪ್ರೀತಿ ತೋರಿದ್ದಾರೆ. ಅವರ ಅಭಿಮಾನದಿಂದ ಇನ್ನಷ್ಟು ಕೊಡುಗೆಗಳನ್ನು ನೀಡಲು ನಾವು ಉತ್ಸುಕರಾಗಿದ್ದೇವೆ‘ ಎಂದರು. ಲಾಲಿಗಾ ಆಯೋಜಿಸುವ ಪಂದ್ಯಗಳನ್ನು ಭಾರತದಲ್ಲಿ ಎಂಟಿವಿ ಮತ್ತು ವೂಟ್‌ ಸೆಲೆಕ್ಟ್‌ನ ಸಾಮಾಜಿಕ ಜಾಲತಾಣ ವಿಭಾಗಗಳಲ್ಲಿ ನೇರ ಪ್ರಸಾರ ಮಾಡುತ್ತಿವೆ. ಲಾಲಿಗಾ ಫುಟ್‌ಬಾಲ್ ಸಂಸ್ಥೆಯ ಭಾಗೀದಾರರಾದ ಪುಮಾ ಇಂಡಿಯಾದ ನಿರ್ದೇಶಕ ಅಮಿತ್ ಪ್ರಭು, ಹೀರೊ ವೈರ್ಡ್‌ನ ಬ್ರ್ಯಾಂಡ್‌ ಕಮ್ಯುನಿಕೇಷನ್ ನಿರ್ದೇಶಕಿ ಆರುಷಿ ಅವಸ್ಥಿ, ಅನಂತಪುರ ಸ್ಪೋರ್ಟ್ಸ್ ಅಕಾಡೆಮಿಯ ನಿರ್ದೇಶಕ ಸಾಯಿ ಕೃಷ್ಣ ಪುಲ್ಲೂರು ಕಾರ್ಯಕ್ರಮದಲ್ಲಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.