ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಸೆಮಿಫೈನಲ್‌ಗಾಗಿ ಬಿಎಫ್‌ಸಿ ಹೋರಾಟ ಫತೋರ್ಡ: ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಳ್ಳುವ ಕೊನೆಯ ಅವಕಾಶದಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಭಾನುವಾರ ಎಟಿಕೆ ಮೋಹನ್ ಬಾಗನ್ ತಂಡವನ್ನು ಎದುರಿಸಲಿದೆ. ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಈ ಪಂದ್ಯ ಬಿಎಫ್‌ಸಿಗೆ ನಿರ್ಣಾಯಕವಾಗಿದೆ. ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎಟಿಕೆಎಂಬಿಗೂ ಗೆಲುವು ಅನಿವಾರ್ಯ. ಏಳು ಬೀಳುಗಳನ್ನು ಕಂಡಿರುವ ಎಟಿಕೆಎಂಬಿ ಹ್ಯಾಟ್ರಿಕ್ ಜಯದ ನಂತರ ಹಿಂದಿನ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡು ಸ್ವಲ್ಪ ಹಿನ್ನಡೆಗೆ ಒಳಗಾಗಿದೆ. 17 ಪಂದ್ಯಗಳಿಂದ 31 ಪಾಯಿಂಟ್ ಗಳಿಸಿರುವ ತಂಡ ಲೀಗ್ ಹಂತ್ ಚಾಂಪಿಯನ್ ಪಟ್ಟಕ್ಕಾಗಿ ಹೈದರಾಬಾದ್‌ ಮತ್ತು ಜೆಮ್ಶೆಡ್‌ಪುರ ಎಫ್‌ಸಿ ಜೊತೆ ಪೈಪೋಟಿ ನಡೆಸುತ್ತಿದೆ. 18 ಪಂದ್ಯಗಳನ್ನು ಆಡಿರುವ ಬಿಎಫ್‌ಸಿ 26 ಪಾಯಿಂಟ್ಸ್ ಕಲೆ ಹಾಕಿದೆ. ಅಂತಿಮ ನಾಲ್ಕರಲ್ಲಿ ಸ್ಥಾನ ಗಳಿಸಬೇಕಾದರೆ ತಂಡ ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಬೇಕು ಮತ್ತು ಇತರ ಪಂದ್ಯಗಳ ಫಲಿತಾಂಶಕ್ಕಾಗಿ ಕಾಯಬೇಕು. ಜಯೇಶ್ ಮತ್ತು ರೋಹಿತ್ ಅವರು ತರಬೇತಿಗೆ ಮರಳಿದ್ದು ಇಮಾನ್ ಮತ್ತು ದಮೈತ್ ಅವರು ಕೂಡ ಭಾನುವಾರದ ಪಂದ್ಯಕ್ಕೆ ಲಭ್ಯ ಇದ್ದಾರೆ ಎಂದು ಬಿಎಫ್‌ಸಿ ಕೋಚ್ ಮಾರ್ಕೊ ಪೆಜವೊಲಿ ತಿಳಿಸಿದ್ದಾರೆ. ರೋಷನ್ ಸಿಂಗ್ ಈಗ ಅಮೋಘ ಫಾರ್ಮ್‌ನಲ್ಲಿದ್ದು ರಕ್ಷಣಾ ವಿಭಾಗದ ಈ ಆಟಗಾರ ಈ ವರೆಗೆ ಏಳು ಅಸಿಸ್ಟ್‌ಗಳನ್ನು ಮಾಡಿದ್ದು ಒಂದು ಗೋಲು ಕೂಡ ಗಳಿಸಿದ್ದಾರೆ. ಭಾನುವಾರವೂ ಅವರು ಉತ್ತಮ ಸಾಮರ್ಥ್ಯ ಮುಂದುವರಿಸುವ ನಿರೀಕ್ಷೆ ಇದೆ ಎಂದು ಪೆಜವೊಲಿ ಅಭಿಪ್ರಾಯಪಟ್ಟರು. ಪಂದ್ಯ ಆರಂಭ: ರಾತ್ರಿ 7.30 ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ಎಟಿಕೆಎಂಬಿಯಲ್ಲಿ ಅತ್ಯುತ್ತಮ ಆಟಗಾರರು ಇದ್ದಾರೆ. ಆದರೆ ನಾವು ಸದ್ಯ ನಮ್ಮ ತಂಡದ ಮೇಲೆ ಮಾತ್ರ ಗಮನ ಇರಿಸಿದ್ದೇವೆ. ನಮ್ಮದು ಈಗಲೂ ಬಲಿಷ್ಠ ತಂಡ. - ಮಾರ್ಕೊ ಪೆಜವೊಲಿ, ಬಿಎಫ್‌ಸಿ ಕೋಚ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.