ಫುಟ್ಬಾಲ್: ಭಾರತ ತಂಡದ ಮಾಜಿ ಆಟಗಾರ ಸುರಜಿತ್‌ ಸೇನ್‌ ಗುಪ್ತ ಇನ್ನಿಲ್ಲ ಕೋಲ್ಕತ್ತ: ಭಾರತ ತಂಡದ ಮಾಜಿ ಮಿಡ್‌ಫೀಲ್ಡರ್‌ ಆಗಿದ್ದ ಸುರಜಿತ್‌ ಸೇನ್‌ಗುಪ್ತ (71) ಅವರು ಕೋವಿಡ್‌ನಿಂದಾಗಿ ನಗರದ ಆಸ್ಪತ್ರೆಯೊಂದರಲ್ಲಿ ಗುರುವಾರ ಮಧ್ಯಾಹ್ನ ನಿಧನರಾದರು. 1970ರ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದಲ್ಲಿ ಸುರಜಿತ್ ಆಡಿದ್ದರು. ಈಸ್ಟ್‌ ಬೆಂಗಾಲ್‌ ತಂಡಕ್ಕೆ ಆಡುತ್ತಿದ್ದ ಸುರಜಿತ್‌ ಅವರಿಗೆ ಕೋವಿಡ್‌ ಕಾಣಿಸಿಕೊಂಡಿದ್ದು, ಜನವರಿ 23ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ವಾರದಿಂದ ವೆಂಟಿಲೇಟರ್‌ನಲ್ಲಿದ್ದರು. ಈಸ್ಟ್‌ ಬೆಂಗಾಲ್‌ ತಂಡದ ವೈಭವದ ದಿನಗಳಲ್ಲಿ ಅವರು ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಅವರು ಆಡಿದ್ದ ಅವಧಿಯಲ್ಲಿ ಈಸ್ಟ್‌ ಬೆಂಗಾಲ್‌ ಸತತ ಆರು ಬಾರಿ (1970–76) ಕೋಲ್ಕತ್ತ ಫುಟ್‌ಬಾಲ್‌ ಲೀಗ್‌ನಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಆರು ಬರಿ ಐಎಫ್‌ಎ ಶೀಲ್ಡ್‌ ಹಗೂ ಮೂರು ಬಾರಿ ಡ್ಯುರಾಂಡ್‌ ಕಪ್‌ನಲ್ಲಿ ಈಸ್ಟ್‌ ಬೆಂಗಾಲ್‌ ವಿಜೇತರ ಕಿರೀಟ ಧರಿಸಿತ್ತು. ಕಳೆದ ತಿಂಗಳಷ್ಟೇ ಭಾರತ ಹಾಗೂ ಈಸ್ಟ್‌ ಬೆಂಗಾಲ್‌ ತಂಡದ ಇನ್ನೊಬ್ಬ ಪ್ರಮುಖ ಆಟಗಾರ ಸುಭಾಷ್‌ ಭೌಮಿಕ್‌ ನಿಧನರಾಗಿದ್ದರು. ಸುರಜಿತ್‌ ಎರಡು ವರ್ಷ ಮೋಹನ್‌ ಬಾಗನ್‌ ತಂಡಕ್ಕೆ (1972–74) ತಂಡಕ್ಕೆ ಆಡಿದ್ದರು. 1980ರಲ್ಲಿ ಮಹಮಡನ್‌ ಸ್ಪೋರ್ಟಿಂಗ್‌ ಪರ ಆಡಿದ್ದರು. ಕ್ರೀಡಾ ಜೀವನದ ಸಂಧ್ಯಾಕಾಲದಲ್ಲಿ ಅವರು ಮೋಹನ್‌ ಬಾಗನ್‌ ತಂಡಕ್ಕೆ ಮರಳಿದ್ದರು. ‘ಇಂದು ಹಿರಿಯ, ತಾರಾ ವರ್ಚಸ್ಸಿನ ಆಟಗಾರರನನ್ನು ಕಳೆದುಕೊಂಡಿದ್ದವೆ. ಅಭಿಮಾನಿಗಳ ನೆಚ್ಚಿನ ಆಟಗಾರರಾಗಿದ್ದ ಅವರು ಎಂದೆಂದೂ ನಮ್ಮ ಹೃದಯದಲ್ಲಿರುತ್ತಾರೆ. ಸಂತಾಪಗಳು’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್‌ ಮಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.