ಫುಟ್‌ಬಾಲ್‌: ಮೈಸೂರು, ಹಾಸನ ತಂಡಗಳ ಜಯಭೇರಿ ಬೆಂಗಳೂರು: ಮೈಸೂರು ವಿಜಯನಗರ ಎಫ್‌ಸಿ ಮತ್ತು ಹಾಸನ ಎಫ್‌ಸಿ ತಂಡಗಳು ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯ ‘ಸಿ’ ಡಿವಿಷನ್ ಲೀಗ್ ಟೂರ್ನಿಯಲ್ಲಿ ಗುರುವಾರ ಭರ್ಜರಿ ಜಯ ಗಳಿಸಿದವು. ಫೂಟ್‌ಲಾಂಗ್ಸ್ ಎಫ್‌ಸಿ ಎದುರಿನ ಪಂದ್ಯದಲ್ಲಿ ಮೈಸೂರು ವಿಜಯನಗರ ತಂಡ 4–1ರಲ್ಲಿ ಜಯ ಗಳಿಸಿತು. ಮೈಸೂರು ಪರವಾಗಿ ರಾಹುಲ್ 13 ಮತ್ತು 60ನೇ ನಿಮಿಷಗಳಲ್ಲಿ ಗೋಲು ಗಳಿಸಿದರೆ ಪ್ರೀತಮ್ 25ನೇ ನಿಮಿಷದಲ್ಲಿ ಮತ್ತು ಸ್ವರೂಪ್ 33ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಹಾಸನ ಎಫ್‌ಸಿ 2–1ರಲ್ಲಿ ಕೊಡಗು ಎಫ್‌ಸಿಯನ್ನು ಮಣಿಸಿತು. ಹಾಸನ ಪರವಾಗಿ ದರ್ಶನ್‌ (23ನೇ ನಿ) ಮತ್ತು ಮಿಥುನ್ (45ನೇ ನಿ), ಕೊಡಗು ತಂಡಕ್ಕಾಗಿ ಸುಜಿತ್ (4ನೇ ನಿ) ಗೋಲು ಗಳಿಸಿದರು. ಆರ್‌.ಆರ್.ನಗರ ಅಕಾಡೆಮಿ ತಂಡ ಕಣಕ್ಕೆ ಇಳಿಯದ ಕಾರಣ ಡಾನ್ ಬೋಸ್ಕೊ ಎಫ್‌ಸಿಗೆ ವಾಕ್‌ ಓವರ್ ಲಭಿಸಿತು. ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ‘ಸಿ’ ಡಿವಿಷನ್ ಲೀಗ್‌ನ ‘ಎಂ’ ಗುಂಪಿನ ಪಂದ್ಯದಲ್ಲಿ ಟೊರ್ನಾಡೊಸ್ ಎಫ್‌ಸಿ 4–1ರಲ್ಲಿ ಆರ್‌ಬಿಐ ಎಫ್‌ಸಿಯನ್ನು ಮತ್ತು ಬಿನ್ನಿ ಎಫ್‌ಸಿ 3–0ಯಿಂದ ಎಲ್‌ಆರ್‌ಡಿಇ ಎಫ್‌ಸಿಯನ್ನು ಮಣಿಸಿತು. ‘ಪಿ’ ಗುಂಪಿನ ಹಣಾಹಣಿಯಲ್ಲಿ ವೆಟೆರನ್ಸ್ ಎಫ್‌ಸಿ ಮತ್ತು ಬೆಂಟೆಕ್ಸ್ ಎಫ್‌ಸಿ ನಡುವಿನ ಪಂದ್ಯ 2–2ರಲ್ಲಿ ಡ್ರಾ ಆಯಿತು. ‘ಕೆ’ ಗುಂಪಿನಲ್ಲಿ ತಾಮರೈ ಕಣ್ಣನ್ ಎಫ್‌ಸಿ 3–0ಯಿಂದ ಬಾಗಲಕುಂಟೆ ಎಫ್‌ಸಿಯನ್ನು ಸೋಲಿಸಿತು. ‘ಒ’ ಗುಂಪಿನಲ್ಲಿ ಬೆಂಗಳೂರು ಸಿಟಿ ಎಫ್‌ಸಿ 7–0ಯಿಂದ ಮಹಾರಾಜ ಸೋಷಿಯಲ್ ಎಫ್‌ಸಿಯನ್ನು ಸೋಲಿಸಿತು.ಇಂಡಿಯನ್ ನೈಟ್ಸ್ ಎಫ್‌ಸಿ ಮತ್ತು ಜೆ ಸ್ಪೋರ್ಟ್ಸ್‌ ಎಫ್‌ಸಿ ನಡುವಿನ ಪಂದ್ಯ 1–1ರಲ್ಲಿ ಡ್ರಾ ಆಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.