ಫುಟ್‌ಬಾಲ್: ಬೆರಾರೂಸ್‌ಗೆ ಮಣಿದ ಭಾರತ ಮನಾಮ: ಪಂದ್ಯದ ದ್ವಿತೀಯಾರ್ಧದಲ್ಲಿ ಮೂರು ಗೋಲುಗಳನ್ನು ಬಿಟ್ಟುಕೊಟ್ಟ ಭಾರತ ತಂಡವು ಬೆಲಾರೂಸ್‌ ಎದುರಿನ ಅಂತರರರಾಷ್ಟ್ರೀಯ ಸ್ನೇಹಪರ ಫುಟ್‌ಬಾಲ್ ಹಣಾಹಣಿಯಲ್ಲಿ ಶನಿವಾರ 0–3ರಿಂದ ಸೋತಿತು. ಬ್ಯಾಕಾವು ಅರ್ಟ್‌ಸೆಮ್‌ (48ನೇ ನಿಮಿಷ), ಸಲವೆಯಿ ಆ್ಯಂಡ್ರೆಯಿ (68ನೇ ನಿ.) ಮತ್ತು ಹ್ರಮ್ಯಕಾ ವಲೇರಿ (90+2 ನೇ ನಿಮಿಷ) ಬೆಲಾರೂಸ್‌ ಪರ ಕಾಲ್ಚಳಕ ತೋರಿದರು. ಫಿಫಾ ವಿಶ್ವ ರ‍್ಯಾಂಕಿಂಗ್‌ನಲ್ಲಿ 94ನೇ ಸ್ಥಾನದಲ್ಲಿರುವ ಬೆಲಾರೂಸ್‌ ಎದುರು ಪಂದ್ಯದ ಮೊದಲ ಅವಧಿಯಲ್ಲಿ ಭಾರತ ಉತ್ತಮ ಆಟವಾಡಿತು. ಆದರೆ ದ್ವಿತೀಯಾರ್ಧದಲ್ಲಿ ಲಯ ಕಳೆದುಕೊಂಡಿತು. ಏಷ್ಯಾಕಪ್‌ ಅಂತಿಮ ಸುತ್ತಿನ ಅರ್ಹತಾ ಪಂದ್ಯಗಳಿಗೆ ಎರಡು ತಿಂಗಳು ಬಾಕಿ ಇರುವಂತೆಯೇ ಭಾರತ ತಂಡದ ಸಾಮರ್ಥ್ಯ ಕೋಚ್‌ ಇಗರ್ ಸ್ಟಿಮ್ಯಾಚ್ ಅವರ ಕಳವಳಕ್ಕೆ ಕಾರಣವಾಗಿದೆ. ಕೋಲ್ಕತ್ತದಲ್ಲಿ ಜೂನ್‌ನಲ್ಲಿ ಏಷ್ಯನ್‌ ಅರ್ಹತಾ ಪಂದ್ಯಗಳು ನಿಗದಿಯಾಗಿವೆ. ಈ ಪಂದ್ಯದ ಮೂಲಕ ಹಾರ್ಮಿಪಮ್‌ ರುವಿವಾಹ್‌ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. ಬುಧವಾರ ಬಹ್ರೇನ್ ಎದುರು ನಡೆದ ಸ್ನೇಹಪರ ಪಂದ್ಯದಲ್ಲಿ ಭಾರತ ತಂಡವು 1–2ರಿಂದ ಸೋತಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.