‘ದೇವರ ಕೈ’ ಜೆರ್ಸಿ ಹರಾಜಿಗೆ ನಿರ್ಧಾರ ನ್ಯೂಯಾರ್ಕ್‌: ಫುಟ್‌ಬಾಲ್ ದಂತಕತೆ ಡಿಯೆಗೊ ಮರಡೋನಾ ಅವರಿಗೆ ‘ದೇವರ ಕೈ’ ಖ್ಯಾತಿ ತಂದುಕೊಟ್ಟ ಗೋಲು ಗಳಿಸಿದ ಪಂದ್ಯದಲ್ಲಿ ಧರಿಸಿದ್ದ ಜೆರ್ಸಿಯನ್ನು ಈ ತಿಂಗಳ ಅಂತ್ಯದಲ್ಲಿ ಹರಾಜು ಮಾಡಲು ನಿರ್ಧರಿಸಲಾಗಿದೆ. 1986ರ ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ಎದುರಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಪರವಾಗಿ ಮರಡೋನಾ ಎರಡು ಗೋಲು ಗಳಿಸಿದ್ದರು. ಇದರಲ್ಲಿ ಒಂದು ಗೋಲು ಅವರ ಕೈಯನ್ನು ಸೋಕಿ ಗೋಲುಪೆಟ್ಟಿಗೆಯ ಒಳಗೆ ಸೇರಿತ್ತು. ಅದನ್ನು ಗೋಲಾಗಿ ಪರಿಗಣಿಸಲಾಗಿತ್ತು. ಹೀಗಾಗಿ ದೇವರ ಕೈ ಗೋಲು ಎಂದು ಹೆಸರು ಗಳಿಸಿತ್ತು. ಇಂಗ್ಲೆಂಡ್ ಎದುರು 2–1ರ ಜಯ ಗಳಿಸಲು ಅರ್ಜೆಂಟೀನಾಗೆ ಆ ಗೋಲು ನಿರ್ಣಾಯಕವಾಗಿತ್ತು. ಅಂದು 10ನೇ ಸಂಖ್ಯೆಯ ಜೆರ್ಸಿ ತೊಟ್ಟು ಮರಡೋನಾ ಆಡಿದ್ದರು. ಫೈನಲ್‌ನಲ್ಲಿ ಅರ್ಜೆಂಟೀನಾ ಜಯ ಗಳಿಸಿತ್ತು. ಆ ಮೂಲಕ ಎಂಟು ವರ್ಷಗಳಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದುಕೊಂಡಿತ್ತು. ಮೊದಲೇ ಸೂಪರ್ ಸ್ಟಾರ್ ಆಗಿದ್ದ ಮರಡೋನಾ ಆ ವಿಶ್ವಕಪ್ ನಂತರ ಅರ್ಜೆಂಟೀನಾದಲ್ಲಿ ‘ದೇವರು’ ಆಗಿದ್ದರು. 2020ರಲ್ಲಿ ಮರಡೋನಾ ಹೃದಯಾಘಾತದಿಂದ ಸಾವಿಗೀಡಾದ ನಂತರ ಅರ್ಜೆಂಟೀನಾದಲ್ಲಿ ಮೂರು ದಿನ ರಾಷ್ಟ್ರೀಯ ಶೋಕಾಚರಣೆ ಮಾಡಲಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.