ಪ್ರಿಯಾಂಕಾ ಕಾಲ್ಚಳಕ: ಭಾರತಕ್ಕೆ ಮಣಿದ ಈಜಿಪ್ಟ್‌ ಜಾರ್ಕಾ, ಜೋರ್ಡಾನ್‌: ಪ್ರಿಯಾಂಕಾ ದೇವಿ ಗಳಿಸಿದ ಏಕೈಕ ಗೋಲು ಭಾರತಕ್ಕೆ ಜಯ ತಂದುಕೊಟ್ಟಿತು. ಬುಧವಾರ ಇಲ್ಲಿ ನಡೆದ ಮೊದಲ ಸ್ನೇಹಪರ ಪಂದ್ಯದಲ್ಲಿ ಭಾರತದ ಮಹಿಳಾ ತಂಡ 1–0ಯಿಂದ ಈಜಿಪ್ಟ್ ತಂಡಕ್ಕೆ ಸೋಲುಣಿಸಿತು. ಪ್ರಿಯಾಂಕಾ 30ನೇ ನಿಮಿಷದಲ್ಲಿ ಕಾಲ್ಚಳಕ ತೋರಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 95ನೇ ಸ್ಥಾನದಲ್ಲಿರುವ ಈಜಿಪ್ಟ್ ವಿರುದ್ಧ ಪ್ರಿಯಾಂಕಾ ಗಳಿಸಿದ ಮೊದಲ ಗೋಲು ಇದು. ಭಾರತ ರ‍್ಯಾಂಕಿಂಗ್‌ನಲ್ಲಿ 59ನೇ ಸ್ಥಾನದಲ್ಲಿದೆ. ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಲು ಯತ್ನಿಸಿದ ಭಾರತಕ್ಕೆ 18ನೇ ನಿಮಿಷದಲ್ಲಿ ಗೋಲು ಗಳಿಕೆಯ ಅವಕಾಶವೊಂದು ಲಭಿಸಿತ್ತು. ಆದರೆ ನಾಯಕಿ ಆಶಾಲತಾ ದೇವಿ ಪಾಸ್‌ ಮಾಡಿದ ಚೆಂಡಿನಲ್ಲಿ ಗೋಲು ಗಳಿಸುವ ಅಂಜು ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಇದಾದ ಎರಡು ನಿಮಿಗಳ ಬಳಿಕವೂ ಭಾರತದ ಅವಕಾಶವೊಂದು ಕೈತಪ್ಪಿತು. 30ನೇ ನಿಮಿಷದಲ್ಲಿ ದಲಿಮಾ ನೀಡಿದ ಪಾಸ್‌ನಲ್ಲಿ ಸೊಗಸಾದ ಗೋಲು ಗಳಿಸುವಲ್ಲಿ ಯಂಗ್‌ ಫೀಲ್ಡರ್‌ ಪ್ರಿಯಾಂಕಾ ತಪ್ಪು ಮಾಡಲಿಲ್ಲ. ದ್ವಿತೀಯಾರ್ಧದಲ್ಲಿ ಭಾರತ ತಂಡಕ್ಕೆ ಹೆಚ್ಚು ಅವಕಾಶಗಳು ಲಭಿಸಿದರೂ ಗೋಲು ಗಳಿಕೆ ಸಾಧ್ಯವಾಗಲಿಲ್ಲ. ಜೋರ್ಡಾನ್‌ನಲ್ಲಿ ಭಾರತ ತಂಡಕ್ಕೆ ಒಲಿದ ಮೊದಲ ಗೆಲುವು ಇದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.