ಬೆನ್ಜೆಮಾ ಹ್ಯಾಟ್ರಿಕ್‌: ರಿಯಲ್ ಜಯಭೇರಿ ಮ್ಯಾಡ್ರಿಡ್‌: ಕರೀಂ ಬೆನ್ಜೆಮಾ ಗಳಿಸಿದ ಹ್ಯಾಟ್ರಿಕ್ ಗೋಲುಗಳು ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ ರಿಯಲ್ ಮ್ಯಾಡ್ರಿಡ್ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿತು. ಗುರುವಾರ ಸ್ಟ್ಯಾನ್‌ಫರ್ಡ್ ಬ್ರಿಜ್‌ನಲ್ಲಿ ನಡೆದ ಪಂದ್ಯದಲ್ಲಿ ರಿಯಲ್ ಮ್ಯಾಡ್ರಿಡ್ 3–1ರಲ್ಲಿ ಚೆಲ್ಸಿ ವಿರುದ್ಧ ಜಯ ಗಳಿಸಿತು. 21 ಮತ್ತು 24ನೇ ನಿಮಿಷಗಳಲ್ಲಿ ಬೆನ್ಜೆಮಾ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. 40ನೇ ನಿಮಿಷದಲ್ಲಿ ಕಯ್ ಹವೆಟ್ಜ್ ಗಳಿಸಿದ ಗೋಲಿನೊಂದಿಗೆ ಚೆಲ್ಸಿ ಪಾಳಯದಲ್ಲಿ ಭರವಸೆ ಮೂಡಿತು. ಆದರೆ 46ನೇ ನಿಮಿಷದಲ್ಲಿ ಬೆನ್ಜೆಮಾ ಮತ್ತೊಂದು ಗೋಲು ಗಳಿಸಿ ಹ್ಯಾಟ್ರಿಕ್ ಪೂರೈಸುವುದರೊಂದಿಗೆ ತಂಡದ ಮುನ್ನಡೆಯನ್ನು ಮತ್ತಷ್ಟು ಹೆಚ್ಚಿಸಿದರು. ನಂತರ ಎದುರಾಳಿಗಳನ್ನು ನಿಯಂತ್ರಿಸಿದ ರಿಯಲ್ ಮ್ಯಾಡ್ರಿಡ್ ಗೆಲುವು ತನ್ನದಾಗಿಸಿಕೊಂಡಿತು. ಆರ್ಥಿಕ ಫೇರ್‌ಪ್ಲೇಗೆ ಯುಯೆಫಾ ಹೊಸ ನೀತಿ ನ್ಯಾನ್, ಸ್ವಿಟ್ಜರ್ಲೆಂಡ್‌: ಆರ್ಥಿಕ ಫೇರ್ ಪ್ಲೇ (ಎಫ್‌ಎಫ್‌ಪಿ) ಪರವಾನಗೆ ಮೇಲೆ ನಿಯಂತ್ರಣ ಹೇರುವ ಸಂಬಂಧ ಹೊಸ ನೀತಿಯನ್ನು ಜಾರಿಗೆ ತರಲು ಯುರೋಪಿಯನ್ ಫುಟ್‌ಬಾಲ್ ಸಂಸ್ಥೆಗಳ ಫೆಡರೇಷನ್ (ಯುಯೆಫಾ) ನಿರ್ಧರಿಸಿದೆ. ಆಟಗಾರರ ವೇತನ ನಿಗದಿ ಮಾಡುವಾಗ ಮತ್ತು ಟ್ರಾನ್ಸ್‌ಫರ್ ಸಂದರ್ಭದಲ್ಲಿ ಅನುಸರಿಸಬೇಕಾದ ನೀತಿಯನ್ನು 2010ರಲ್ಲಿ ಜಾರಿಗೆ ತರಲಾಗಿತ್ತು. ಅದರಲ್ಲಿ ಮಾರ್ಪಾಟು ಮಾಡಲು ಯುಯೆಫಾ ಆಡಳಿತ ನಿರ್ಧರಿಸಿದೆ. ಇದರಿಂದಾಗಿ ಕ್ಲಬ್‌ಗಳು ನಷ್ಟ ಅನುಭವಿಸಲಿವೆ ಎನ್ನಲಾಗಿದೆ. ಯುಯೆಫಾದಲ್ಲಿ 55 ಸದಸ್ಯ ರಾಷ್ಟ್ರಗಳಿದ್ದು ಸಾವಿರಕ್ಕೂ ಹೆಚ್ಚು ಕ್ಲಬ್‌ಗಳು ಇದರಲ್ಲಿ ಒಳಗೊಂಡಿವೆ. ಯುರೋಪಿಯನ್ ಯೂನಿಯನ್‌ ಮತ್ತು ಆಯಾ ರಾಷ್ಟ್ರಗಳ ಕಾರ್ಮಿಕ ನೀತಿಗಳನ್ನು ಅಳವಡಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ವೇತನಕ್ಕೆ ಸಂಬಂಧಿಸಿ ನಿರ್ದಿಷ್ಟ ಮೊತ್ತವನ್ನು ನಿಗದಿ ಮಾಡಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.