ಎಟಿಕೆಎಂಬಿ– ಶ್ರೀಲಂಕಾದ ಬ್ಲ್ಯೂಸ್ಟಾರ್ ಮುಖಾಮುಖಿ ಕೋಲ್ಕತ್ತ: ಎಎಫ್‌ಸಿ ಕಪ್ ಫುಟ್‌ಬಾಲ್ ಟೂರ್ನಿಯ ಮುಖ್ಯ ಸುತ್ತಿಗೆ ಸತತ ಎರಡನೇ ಬಾರಿ ಪ್ರವೇಶಿಸಿಸುವ ತವಕದಲ್ಲಿರುವಎಟಿಕೆ ಮೋಹನ್ ಬಾಗನ್‌ (ಎಟಿಕೆಎಂಬಿ) ತಂಡವು ಶ್ರೀಲಂಕಾದ ಬ್ಲ್ಯೂಸ್ಟಾರ್ ಎಸ್‌ಸಿ ತಂಡವನ್ನು ಎದುರಿಸಲಿದೆ. ಪ್ರಿಲಿಮಿನರಿ ಎರಡನೇ ಸುತ್ತಿನ ಈ ಪಂದ್ಯವು ಸಾಲ್ಟ್‌ಲೇಕ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿದೆ. 2020–21ರ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಟೂರ್ನಿಯಲ್ಲಿ ರನ್ನರ್‌ಅಪ್ ಆಗಿರುವ ಎಟಿಕೆಎಂಬಿ ಪ್ರಿಲಿಮನರಿ ಎರಡನೇ ಸುತ್ತಿಗೆ ನೇರ ಅರ್ಹತೆ ಗಳಿಸಿತ್ತು. ಪ್ರಿಲಿಮನರಿ ಮೊದಲ ಸುತ್ತಿನ ಪಂದ್ಯದಲ್ಲಿ ಬ್ಲ್ಯೂಸ್ಟಾರ್ 2–1ರಿಂದ ನೇಪಾಳದ ಮಚ್ಚಿಂದ್ರಾ ಎಫ್‌ಸಿಯನ್ನು ಸೋಲಿಸಿತ್ತು. ಕೋಚ್‌ ಬಂದಾ ಸಮರಕೂನ್‌ ತರಬೇತಿಯಲ್ಲಿ ಪಳಗಿರುವ ಶ್ರೀಲಂಕಾದ ತಂಡದಲ್ಲಿ ಮೂವರು ವಿದೇಶಿ ಆಟಗಾರರಿದ್ದಾರೆ. ಯುವ ಆಟಗಾರರೇ ತಂಡದಲ್ಲಿ ಹೆಚ್ಚಿದ್ದಾರೆ. ಶ್ರೀಲಂಕಾ ಆಟಗಾರರ ಕಿಟ್‌ ಮಾಯ: ಈಗಾಗಲೇ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾ ದೇಶದ ಕೆಲವು ಆಟಗಾರರ ಕಿಟ್‌ಗಳು ಮಾಯವಾಗಿವೆ. ಕೋಲ್ಕತ್ತಾಕ್ಕೆ ಆಗಮಿಸುವ ವೇಳೆಚೆನ್ನೈನಲ್ಲಿ ಕಿಟ್‌ಗಳು ನಾಪತ್ತೆಯಾಗಿವೆ. ರಾಯ್‌ಕೃಷ್ಣ, ಜಿಂಗಾನ್‌ ಅಲಭ್ಯ?: ಎಟಿಕೆಎಂಬಿಯ ಪ್ರಮುಖ ಆಟಗಾರರಾದ ರಾಯ್‌ಕೃಷ್ಣ ಮತ್ತು ಸಂದೇಶ್ ಜಿಂಗಾನ್ ಈ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ. ಫಿಜಿ ಮೂಲದ ಕೃಷ್ಣ ಅವರ ಹತ್ತಿರದ ಸಂಬಂಧಿಯೊಬ್ಬರು ಸಾವನ್ನಪ್ಪಿದ್ದಾರೆ. ಹೀಗಾಗಿ ಅವರು ತಮ್ಮ ದೇಶಕ್ಕೆ ತೆರಳುವ ಸಾಧ್ಯತೆಯಿದೆ. ಜಿಂಗಾನ್‌ ಅವರು ಗಾಯದಿಂದ ಬಳಲುತ್ತಿದ್ದಾರೆ. ಪಂದ್ಯ ಆರಂಭ: ರಾತ್ರಿ 7.30 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.