ಚಾಂಪಿಯನ್ಸ್ ಲೀಗ್: ಮುಂಬೈ ಸಿಟಿ ಎಫ್‌ಸಿ ದಾಖಲೆ ರಿಯಾಧ್‌: ಇರಾಕ್‌ನ ಬಲಿಷ್ಠ ತಂಡ ಏರ್‌ಫೋರ್ಸ್‌ ಕ್ಲಬ್‌ ವಿರುದ್ಧ ರೋಚಕ ಜಯ ಸಾಧಿಸಿದ ಮುಂಬೈ ಸಿಟಿ ಎಫ್‌ಸಿ ತಂಡ ಎಎಫ್‌ಸಿ ಏಷ್ಯನ್‌ ಚಾಂಪಿಯನ್ಸ್‌ ಲೀಗ್‌ ಟೂರ್ನಿಯ ಪಂದ್ಯವೊಂದರಲ್ಲಿ ಜಯ ಗಳಿಸಿದ ಭಾರತದ ಮೊದಲ ಕ್ಲಬ್ ಎನಿಸಿಕೊಂಡಿದೆ. ಕಿಂಗ್ ಫಹದ್‌ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಏರ್‌ ಫೋರ್ಸ್ ಕ್ಲಬ್ ವಿರುದ್ಧ ಮುಂಬೈ 2–1ರಲ್ಲಿ ಜಯ ಗಳಿಸಿತು. 59ನೇ ನಿಮಿಷದಲ್ಲಿ ಗೋಲು ಬಿಟ್ಟುಕೊಟ್ಟಿದ್ದ ತಂಡ ಸೋಲಿನತ್ತ ಸಾಗಿತ್ತು. 70ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಡೀಗೊ ಮೌರಿಸಿಯೊ ಗೋಲು ಗಳಿಸಿ ಸಮಬಲ ಸಾಧಿಸಿದರು. 75ನೇ ನಿಮಿಷದಲ್ಲಿ ಡಿಫೆಂಡರ್ ರಾಹುಲ್ ಭೆಕೆ ಅವರು ಜಾದೂ ಮಾಡಿದರು. ಕಾರ್ನರ್ ಕಿಕ್‌ನಲ್ಲಿ ಅವರು ಗಳಿಸಿದ ಗೋಲು ತಂಡಕ್ಕೆ ಗೆಲುವು ತಂದುಕೊಟ್ಟಿತು. ಮೊದಲ ಪಂದ್ಯದಲ್ಲಿ ಮುಂಬೈ 0–3ರಲ್ಲಿ ಅಲ್‌ ಶಾಬಾದ್‌ಗೆ ಮಣಿದಿತ್ತು. ಗುರುವಾರ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ಯುಎಇಯ ಅಲ್ ಜಜೀರಾ ಕ್ಲಬ್‌ ಎದುರು ಸೆಣಸಲಿದೆ. ಏರ್‌ ಫೋರ್ಸ್ ಕ್ಲಬ್‌ ಸೌದಿ ಅರೆಬಿಯಾದ ಅಲ್ ಶಾಬಾದ್ ಎಫ್‌ಸಿಯನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.