ರಿಲಯನ್ಸ್ ಫೌಂಡೇಷನ್ ಡೆವಲಪ್‌ಮೆಂಟ್ ಲೀಗ್‌: ಯುವ ಫುಟ್‌ಬಾಲ್‌ ಪ್ರತಿಭೆಗಳ ಕಾಲ್ಚಳಕ ಬೆಂಗಳೂರು: ಭಾರತದ ಯುವ ಫುಟ್‌ಬಾಲ್‌ ಆಟಗಾರರೆಲ್ಲ ಶುಕ್ರವಾರದಿಂದ ಗೋವಾದಲ್ಲಿ ತಮ್ಮಪ್ರತಿಭೆಯನ್ನು ಒರೆಗೆ ಹಚ್ಚಿಕೊಳ್ಳಲಿದ್ದಾರೆ.ರಿಲಯನ್ಸ್ ಫೌಂಡೇಷನ್ ಯಂಗ್ ಚಾಂಪ್ಸ್ (ಆರ್‌ಎಫ್‌ವೈಸಿ) ಅಕಾಡೆಮಿಯಲ್ಲಿ ಬೆಳೆದಿರುವ ಆಟಗಾರರು ಒಳಗೊಂಡಂತೆ ವಿವಿಧ ಕ್ಲಬ್‌ಗಳ ಪ್ರತಿಭೆಗಳು ಕಾಲ್ಚಳಕ ತೋರಲು ಸಜ್ಜಾಗಿದ್ದಾರೆ. ರಿಲಯನ್ಸ್ ಫೌಂಡೇಷನ್ ಡೆವಲಪ್‌ಮೆಂಟ್ ಲೀಗ್‌ನಲ್ಲಿ (ಆರ್‌ಎಫ್‌ಡಿಎಲ್‌) ವಿವಿಧ ತಂಡಗಳಲ್ಲಿ ಆಡಲಿದ್ದಾರೆ. ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ತಂಡಗಳ ಯುವ ಘಟಕಗಳನ್ನು ಒಳಗೊಂಡ ಟೂರ್ನಿ ಯುವ ಆಟಗಾರರಿಗಾಗಿ ನಡೆಯಲಿರುವ ಮೊದಲ ಲೀಗ್ ಆಗಿದೆ. ಏಳು ತಂಡಗಳು ಪಾಲ್ಗೊಳ್ಳಲಿವೆ. ಮೊದಲ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ಮತ್ತು ಎಫ್‌ಸಿ ಗೋವಾ ಮುಖಾಮುಖಿಯಾಗಲಿವೆ. ನಗೋವಾ ಅಂಗಣದಲ್ಲಿ ಪಂದ್ಯ ನಡೆಯಲಿದ್ದು ಬೆನಾಲಿಮ್‌ನಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಆರ್‌ಎಫ್‌ವೈಸಿ ತಂಡ ಬೆಂಗಳೂರು ಎಫ್‌ಸಿಯನ್ನು ಎದುರಿಸಲಿದೆ. ಆರ್‌ಎಫ್‌ವೈಸಿ ಅಕಾಡೆಮಿಯ ತಂಡವು ಲೀಗ್‌ನಲ್ಲಿ ಸ್ಪರ್ಧಿಸಲಿರುವವರ ಪೈಕಿ ಅತಿ ಕಿರಿಯ ಆಟಗಾರರನ್ನು ಒಳಗೊಂಡಿದ್ದು 12ನೇ ವಯಸ್ಸಿನಲ್ಲಿ ಅಕಾಡೆಮಿ ಸೇರಿರುವ ಈ ಆಟಗಾರರು 5 ವರ್ಷಗಳ ತರಬೇತಿಯ ಕೊನೆಯ ಹಂತದಲ್ಲಿದ್ದಾರೆ. ಪಂದ್ಯಗಳು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದ್ದು ಪ್ರತಿ ತಂಡಗಳು ಏಳು ಪಂದ್ಯಗಳನ್ನು ಆಡಲಿವೆ. ಅಗ್ರ ಮೂರು ಸ್ಥಾನ ಗಳಿಸುವ ತಂಡಗಳು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ನೆಕ್ಸ್ಟ್‌ ಜೆನ್ ಕಪ್‌ ಟೂರ್ನಿಯಲ್ಲಿ ಸೆಣಸಲು ಅವಕಾಶ ಪಡೆದುಕೊಳ್ಳಲಿವೆ. ಪ್ರೀಮಿಯರ್ ಆಯೋಜಕರು ನೆಕ್ಸ್ಟ್‌ ಜೆನ್ ಕಪ್ ಟೂರ್ನಿ ಆಯೋಜಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.