ಚಾಂಪಿಯನ್ಸ್ ಲೀಗ್‌ ಫುಟ್‌ಬಾಲ್: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಮ್ಯಾಂಚೆಸ್ಟರ್ ಸಿಟಿ ಮ್ಯಾಡ್ರಿಡ್: ಮೊದಲ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಹೊತ್ತುಕೊಂಡಿರುವ ಮ್ಯಾಂಚೆಸ್ಟರ್ ಸಿಟಿ ತಂಡ ಚಾಂಪಿಯನ್ಸ್ ಲೀಗ್‌ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು. ಗುರುವಾರ ಅಟ್ಲೆಟಿಕೊ ಮ್ಯಾಡ್ರಿಡ್ ತಂಡದ ಎದುರು ನಡೆದ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಡ್ರಾ ಸಾಧಿಸಿತು. ಮೊದಲ ಲೆಗ್‌ನ ಪಂದ್ಯದಲ್ಲಿ ಅಟ್ಲೆಟಿಕೊ ಎದುರು 1–0 ಅಂತರದಿಂದ ಜಯ ಗಳಿಸಿದ್ದು ತಂಡದ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಿತು. ಪಂದ್ಯದಲ್ಲಿ ಅಟ್ಲೆಟಿಕೊ ಎಚ್ಚರಿಕೆಯ ಆಟವಾಡಿ ಗೋಲು ಗಳಿಸಲು ಪ್ರಯತ್ನಿಸಿತು. ಮೊದಲ ಲೆಗ್‌ನಲ್ಲಿ ಸೋತಿರುವ ಕಾರಣ ಸೆಮಿಫೈನಲ್ ಹಾದಿ ಸುಗಮವಾಗಬೇಕಾದರೆ ಈ ಪಂದ್ಯದಲ್ಲಿ ಆ ತಂಡ ಉತ್ತಮ ಅಂತರದಲ್ಲಿ ಜಯ ಗಳಿಸಬೇಕಾಗಿತ್ತು. ಮ್ಯಾಂಚೆಸ್ಟರ್ ಸಿಟಿ ರಕ್ಷಣೆಗೆ ಒತ್ತು ಕೊಟ್ಟು ಕಣಕ್ಕೆ ಇಳಿದಿತ್ತು. ಆ ತಂತ್ರದಲ್ಲಿ ಯಶಸ್ಸು ಗಳಿಸಿತು ಕೂಡ. ಮೊದಲ ಲೆಗ್‌ನಲ್ಲಿ ಒಮ್ಮೆಯೂ ಗುರಿಯತ್ತ ಚೆಂಡನ್ನು ಸಾಗಿಸಲು ಸಾಧ್ಯವಾಗದೇ ಇದ್ದ ಅಟ್ಲೆಟಿಕೊ ಈ ಪಂದ್ಯದಲ್ಲಿ ಮೂರು ಬಾರಿ ಎದುರಾಳಿ ತಂಡದ ಆವರಣದಲ್ಲಿ ಆತಂಕ ಸೃಷ್ಟಿಸಿತು. ಆದರೆ ಒಮ್ಮೆಯೂ ಚೆಂಡನ್ನು ಗುರಿ ಮುಟ್ಟಿಸಲು ಸಾಧ್ಯವಾಗಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.