ನಾರ್ಡಿಕ್‌ ಫುಟ್‌ಬಾಲ್‌: ಭಾರತ ಪರಾಭವ ಜೆಸ್ಹೆಮ್, ನಾರ್ವೆ (ಪಿಟಿಐ): ಭಾರತ 17 ವರ್ಷದೊಳಗಿನ ಮಹಿಳಾ ತಂಡದವರು ಇಲ್ಲಿ ನಡೆಯುತ್ತಿರುವ ನಾರ್ಡಿಕ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 0–3 ಗೋಲುಗಳಿಂದ ಐಸ್‌ಲೆಂಡ್‌ ಎದುರು ಸೋತರು. ಎಮಿಲಿಯಾ ಎರಡು ಗೋಲು ಹಾಗೂ ಲಿಜಾ ಬೋರ್ಕ್‌ ಒಂದು ಗೋಲು ಗಳಿಸಿದರು. ಮೊದಲ ಅವಧಿಯಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಭಾರತ ತಂಡದ ಅನಿತಾ ಕುಮಾರಿ, ಗೋಲು ಗಳಿಸುವ 2–3 ಉತ್ತಮ ಅವಕಾಶ ಸೃಷ್ಟಿಸಿದ್ದರು. ಆದರೆ ಹೊಂದಾಣಿಕೆಯ ಕೊರತೆಯಿಂದ ಗೋಲು ಬರಲಿಲ್ಲ. ಎರಡನೇ ಅವಧಿಯಲ್ಲಿ ಐಸ್‌ಲೆಂಡ್‌ ತಂಡ ಪಾರಮ್ಯ ಮೆರೆಯಿತು. ಭಾರತದ ತಂಡದ ಗೋಲ್‌ಕೀಪರ್‌ ಮೆಲೊಡಿ ಚಾನು ಅವರ ಮಿಂಚಿನ ಪ್ರದರ್ಶನ ಇಲ್ಲದೇ ಇರುತ್ತಿದ್ದಲ್ಲಿ, ಸೋಲಿನ ಅಂತರ ಇನ್ನಷ್ಟು ಹೆಚ್ಚುತ್ತಿತ್ತು. 17 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಗೆ ಸಿದ್ಧತೆಯ ಅಂಗವಾಗಿ ಭಾರತ ತಂಡ ಯುರೋಪ್‌ ಪ್ರವಾಸದಲ್ಲಿದ್ದು, ತರಬೇತಿಯ ಜತೆಗೆ ವಿವಿಧ ಟೂರ್ನಿಗಳಲ್ಲಿ ಪಾಲ್ಗೊಂಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.