ಜನಾಂಗೀಯ ನಿಂದನೆ ಪ್ರಕರಣಕ್ಕೆ ತೆರೆ ಕೋಲ್ಕತ್ತ: ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದ ವೇಳೆ ಕೇಳಿಬಂದ ಜನಾಂಗೀಯ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ಸಂಘಟಕರು ತ್ವರಿತಗತಿಯಲ್ಲಿ ಕ್ರಮಕೈಗೊಂಡಿದ್ದಾರೆ. ಇಲ್ಲಿಯ ಕಿಶೋರ್ ಭಾರತಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಇಂಡಿಯನ್ ಏರ್‌ಫೋರ್ಸ್‌ ಎದುರಿನ ಪಂದ್ಯದ ವೇಳೆ ತಮ್ಮ ಆಟಗಾರನಿಗೆ ಜನಾಂಗೀಯ ನಿಂದನೆ ಮಾಡಲಾಗಿದೆ ಎಂದು ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಆರೋಪಿಸಿತ್ತು. ‘ಘಟನೆಗೆ ಸಂಬಂಧಿಸಿದಂತೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಪ್ರಕರಣಕ್ಕೆ ತೆರೆಬಿದ್ದಿದೆ. ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಒಳಗೊಂಡಂತೆ ಸಂಬಂಧಪಟ್ಟ ಎಲ್ಲರೂ ಜತೆಯಲ್ಲಿ ಕುಳಿತು ಈ ವಿವಾದಕ್ಕೆ ತೆರೆಎಳೆದಿದ್ದಾರೆ’ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದರೆ ಯಾವ ರೀತಿಯ ಶಿಸ್ತುಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ‘ವಿವಾದ ಬಗೆಹರಿಸಲು ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇವೆ. ಫುಟ್‌ಬಾಲ್‌ನಂತಹ ಸುಂದರ ಕ್ರೀಡೆಯಲ್ಲಿ ಯಾವುದೇ ರೀತಿಯ ತಾರತಮ್ಯಕ್ಕೆ ಅವಕಾಶವಿಲ್ಲ’ ಎಂದು ಪ್ರಕಟಣೆ ಹೇಳಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.