ಬೆಂಜೆಮಾಗೆ ಗಾಯ: ವಿಶ್ವಕಪ್‌ನಿಂದ ಔಟ್ ದೋಹಾ: ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಬೇಕೆಂಬ ಕನಸಿನೊಂದಿಗೆ ಕತಾರ್‌ಗೆ ಬಂದಿರುವ ಫ್ರಾನ್ಸ್‌ ತಂಡ, ವಿಶ್ವಕಪ್‌ ಟೂರ್ನಿಯ ಆರಂಭಕ್ಕೆ ಮುನ್ನವೇ ಆಘಾತ ಅನುಭವಿಸಿದೆ. ಈ ಬಾರಿಯ ‘ಬ್ಯಾಲನ್‌ ಡಿ ಓರ್’ ಪ್ರಶಸ್ತಿ ವಿಜೇತ ಸ್ಟ್ರೈಕರ್‌ ಕರೀಂ ಬೆಂಜೆಮಾ ಅವರು ಗಾಯದ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಶನಿವಾರ ಅಭ್ಯಾಸದ ವೇಳೆ ಅವರ ಎಡತೊಡೆಯ ಸ್ನಾಯುವಿಗೆ ಗಾಯವಾಗಿದೆ. ‘ಸಹ ಆಟಗಾರರ ಜತೆ ಪೂರ್ಣ ಪ್ರಮಾಣದ ಅಭ್ಯಾಸದಲ್ಲಿ ತೊಡಗಿದ್ದಾಗ ಗಾಯವಾಗಿದೆ. ಅವರ ಎಡತೊಡೆಯ ಸ್ನಾಯು ಹರಿದಿರುವುದು ಎಂಆರ್‌ಐ ಸ್ಕ್ಯಾನಿಂಗ್‌ನಿಂದ ಖಚಿತವಾಗಿದೆ. ಬೆಂಜೆಮಾ ವಿಶ್ವಕಪ್‌ನಲ್ಲಿ ಆಡುವುದಿಲ್ಲ’ ಎಂದು ಫ್ರಾನ್ಸ್‌ ಫುಟ್‌ಬಾಲ್‌ ಫೆಡರೇಷನ್‌ ಪ್ರಕಟಣೆ ತಿಳಿಸಿದೆ. 2014ರ ವಿಶ್ವಕಪ್‌ನಲ್ಲಿ ಆಡಿದ್ದ ಅವರು, ಫ್ರಾನ್ಸ್‌ ಪರ ಅತಿಹೆಚ್ಚು ಗೋಲು ಗಳಿಸಿದ್ದರು. ವಿವಾದಕ್ಕೆ ಸಿಲುಕಿ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರಿಂದ 2018 ರಲ್ಲಿ ಆಡಿರಲಿಲ್ಲ. 34 ವರ್ಷದ ಅವರಿಗೆ ಈ ಬಾರಿಯದ್ದು ಬಹುತೇಕ ಕೊನೆಯ ವಿಶ್ವಕಪ್‌ ಆಗಿತ್ತು. ಪ್ರಮುಖ ಆಟಗಾರರಾದ ಪಾಲ್‌ ಪೊಗ್ಬಾ ಮತ್ತು ಎಂಗೊಲೊ ಕಾಂಟೆ ಬಳಿಕ ಇದೀಗ ಬೆಂಜೆಮಾ ಕೂಡಾ ಗಾಯಗೊಂಡಿರುವುದು ಹಾಲಿ ಚಾಂಪಿಯನ್ನರಿಗೆ ಭಾರಿ ಹಿನ್ನಡೆ ಉಂಟುಮಾಡಿದೆ. ‘ಡಿ’ ಗುಂಪಿನಲ್ಲಿರುವ ಫ್ರಾನ್ಸ್‌ ಮಂಗಳವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಆ ಬಳಿಕ ಡೆನ್ಮಾರ್ಕ್‌ ಹಾಗೂ ಟ್ಯುನೀಷಿಯಾ ವಿರುದ್ಧ ಆಡಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.