ಇಂಗ್ಲೆಂಡ್‌ಗೆ ಹ್ಯಾರಿ ಕೇನ್‌ ಬಲ ಉಭಯ ತಂಡಗಳು ಎದುರಾಗಲಿರುವುದು ಇದೇ ಮೊದಲು 1966ರ ಬಳಿಕ ಇಂಗ್ಲೆಂಡ್‌ ವಿಶ್ವಕಪ್‌ ಗೆದ್ದಿಲ್ಲ ಕಳೆದ ಸಲ ಸೆಮಿಫೈನಲ್‌ನಲ್ಲಿ ಸೋತಿತ್ತು ದೋಹಾ: ಐದೂವರೆ ದಶಕಗಳ ಪ್ರಶಸ್ತಿ ಬರ ನೀಗಿಸುವ ಗುರಿ ಇಟ್ಟುಕೊಂಡಿರುವ ಇಂಗ್ಲೆಂಡ್‌ ತಂಡ, ವಿಶ್ವಕಪ್‌ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಸೋಮವಾರ ಆರಂಭಿಸಲಿದೆ. ದೋಹಾದ ಅಲ್‌ ಖಲೀಫಾ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಹ್ಯಾರಿ ಕೇನ್‌ ಬಳಗ, ಏಷ್ಯಾದ ಫುಟ್‌ಬಾಲ್‌ ಶಕ್ತಿಗಳಲ್ಲಿ ಒಂದಾಗಿರುವ ಇರಾನ್‌ ತಂಡದ ಸವಾಲು ಎದುರಿಸಲಿದೆ. ಉಭಯ ತಂಡಗಳು ಅಂತರರಾಷ್ಟ್ರೀಯ ಪಂದ್ಯದಲ್ಲಿ ಎದುರಾಗುತ್ತಿರುವುದು ಇದೇ ಮೊದಲು. ಇದುವರೆಗೆ 16 ಸಲ ವಿಶ್ವಕಪ್‌ನಲ್ಲಿ ಆಡಿರುವ ಇಂಗ್ಲೆಂಡ್‌, ಒಮ್ಮೆ ಮಾತ್ರ (1966) ಕಿರೀಟ ಮುಡಿಗೇರಿಸಿಕೊಂಡಿತ್ತು. ಆ ಬಳಿಕ ಸತತ ನಿರಾಸೆ ಅನುಭವಿಸಿದೆ. 2018 ರಲ್ಲಿ ರಷ್ಯಾದಲ್ಲಿ ನಡೆದಿದ್ದ ಟೂರ್ನಿಯ ಸೆಮಿಫೈನಲ್‌ನಲ್ಲಿ ಇಟಲಿ ಎದುರು ಪೆನಾಲ್ಟಿ ಶೂಟೌಟ್‌ನಲ್ಲಿ ಸೋತಿತ್ತು. 75 ಅಂತರರಾಷ್ಟ್ರೀಯ ಪಂದ್ಯಗಳಿಂದ 51 ಗೋಲುಗಳನ್ನು ಗಳಿಸಿರುವ ಕೇನ್‌ ಅವರ ಮೇಲೆ ಇಂಗ್ಲೆಂಡ್‌ ಹೆಚ್ಚಿನ ಭರವಸೆ ಇಟ್ಟಿದೆ. ಕಳೆದ ವಿಶ್ವಕಪ್‌ನಲ್ಲಿ ಆರು ಗೋಲುಗಳನ್ನು ಗಳಿಸಿದ್ದ ಅವರು ‘ಗೋಲ್ಡನ್‌ ಬೂಟ್‌’ ಗೌರವ ಪಡೆದಿದ್ದರು. ಜೇಮ್ಸ್‌ ಮ್ಯಾಡಿಸನ್‌, ಜಾಕ್‌ ಗ್ರೇಲಿಶ್‌, ಫಿಲ್‌ ಫಾಡೆನ್ ಮತ್ತು 19 ವರ್ಷದ ಮಿಡ್‌ಫೀಲ್ಡರ್‌ ಜೂಡ್‌ ಬೆಲಿಂಗ್‌ಹ್ಯಾಂ ಅವರಿಂದಲೂ ಉತ್ತಮ ಪ್ರದರ್ಶನ ನಿರೀಕ್ಷಿಸುತ್ತಿದೆ. ಇಂಗ್ಲೆಂಡ್‌ ತಂಡ ತಾನಾಡಿದ ಕೊನೆಯ ಆರು ಅಂತರರಾಷ್ಟ್ರೀಯ ‍ಪಂದ್ಯಗಳಲ್ಲಿ ಗೆಲುವು ಪಡೆದಿಲ್ಲ. ವಿಶ್ವಕಪ್‌ಗೆ ಬರುವ ಮುನ್ನ ಆಡಿದ್ದ ಅಂತಿಮ ಪಂದ್ಯದಲ್ಲಿ ಜರ್ಮನಿ ಜತೆ 3–3 ಗೋಲುಗಳ ಡ್ರಾ ಸಾಧಿಸಿತ್ತು. ವಿಶ್ವಕಪ್‌ ಟೂರ್ನಿಯ ಅರ್ಹತಾ ಸುತ್ತಿನ 10 ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದಿತ್ತು. ಆತ್ಮವಿಶ್ವಾಸದಲ್ಲಿ ಇರಾನ್: ಮತ್ತೊಂದೆಡೆ ಇರಾನ್‌ ತಂಡ ವಿಶ್ವಕಪ್‌ ಟೂರ್ನಿಯ ಸಿದ್ಧತೆಯ ಹಾದಿಯಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದೆ. ಒಂದು ತಿಂಗಳಿಗೂ ಅಧಿಕ ಸಮಯದಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆ, ತಂಡದ ತಯಾರಿಯ ಮೇಲೂ ತನ್ನ ಪರಿಣಾಮ ಬೀರಿದೆ. ಸ್ಟ್ರೈಕರ್‌ ಸರ್ದರ್‌ ಅಜ್‌ಮೋನ್‌ ಅವರನ್ನೊಳಗೊಂಡ ಇರಾನ್‌ ಫಿಫಾ ರ್‍ಯಾಂಕಿಂಗ್‌ನಲ್ಲಿ 20ನೇ ಸ್ಥಾನದಲ್ಲಿದ್ದು, ಎದುರಾಳಿ ತಂಡಕ್ಕೆ ಪ್ರಬಲ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದೆ. ‘ತಂಡದ ಸದಸ್ಯರು ವಿವಾದಗಳನ್ನು ಮರೆತು ಆಟದ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿದ್ದಾರೆ’ ಎಂದರು ಇರಾನ್‌ ಆಟಗಾರ ಅಲಿರೆಜಾ ಜಹಾನ್‌ಬಕ್ಷ್‌ ಹೇಳಿದ್ದಾರೆ. ಇರಾನ್‌ ಸತತ ಮೂರನೇ ವಿಶ್ವಕಪ್‌ನಲ್ಲಿ ಆಡುತ್ತಿದೆ. ಒಟ್ಟಾರೆ ಐದು ವಿಶ್ವಕಪ್‌ ಟೂರ್ನಿಗಳಲ್ಲಿ ಆಡಿದೆಯಾದರೂ, ಒಮ್ಮೆಯೂ ಗುಂಪು ಹಂತವನ್ನು ದಾಟಿಲ್ಲ. ಏಷ್ಯಾ ವಲಯದ ಅರ್ಹತಾ ಸುತ್ತಿನಲ್ಲಿ 18 ಪಂದ್ಯಗಳಲ್ಲಿ 14 ರಲ್ಲಿ ಗೆದ್ದು, ವಿಶ್ವಕಪ್‌ನಲ್ಲಿ ಆಡುವ ಅವಕಾಶ ಗಳಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.