ಫುಟ್‌ಬಾಲ್‌: ಜೂನಿಯರ್‌ ತಂಡಕ್ಕೆ ಗಾವ್ಳಿ ಕೋಚ್ ನವಿ ಮುಂಬೈ: ಭಾರತ ಫುಟ್‌ಬಾಲ್‌ ತಂಡದ ಮಾಜಿ ಆಟಗಾರ ಮಹೇಶ್‌ ಗಾವ್ಳಿ ಅವರು 20 ವರ್ಷದೊಳಗಿನ ಪುರುಷರ ತಂಡಕ್ಕೆ ನೂತನ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಷಣ್ಮುಗಂ ವೆಂಕಟೇಶ್ ಅವರಿಂದ ತೆರವಾದ ಸ್ಥಾನವನ್ನು ಗಾವ್ಳಿ ತುಂಬಲಿದ್ದಾರೆ ಎಂದು ಎಐಎಫ್‌ಎಫ್‌ ಭಾನುವಾರ ಪ್ರಕಟಿಸಿದೆ. ಭಾರತ ತಂಡ ಎಎಫ್‌ಸಿ 20 ವರ್ಷದೊಳಗಿನವರ ಏಷ್ಯಾಕಪ್‌ ಟೂರ್ನಿಗೆ ಅರ್ಹತೆ ಪಡೆಯಲು ವಿಫಲವಾದ ಬೆನ್ನಲ್ಲೇ ವೆಂಕಟೇಶ್‌ ಅವರು ಕೋಚ್‌ ಹುದ್ದೆ ತೊರೆದಿದ್ದರು. ‘ಐ.ಎಂ ವಿಜಯನ್‌ ನೇತೃತ್ವದ ತಾಂತ್ರಿಕ ಸಮಿತಿಯು ಕೋಚ್‌ ಹುದ್ದೆಗೆ ಗಾವ್ಳಿ ಅವರ ಹೆಸರನ್ನು ಸೂಚಿಸಿದೆ’ ಎಂದು ಎಐಎಫ್‌ಎಫ್‌ ಪ್ರಕಟಣೆ ತಿಳಿಸಿದೆ. ಜೂನಿಯರ್‌ ತಂಡದ ಕೋಚ್‌ ಹುದ್ದೆ ವಹಿಸಿಕೊಳ್ಳುವ ಜತೆಯಲ್ಲೇ ಅವರು ಸೀನಿಯರ್‌ ತಂಡದ ಸಹಾಯಕ ಕೋಚ್‌ ಹುದ್ದೆಯಲ್ಲೂ ಮುಂದುವರಿಯಲಿದ್ದಾರೆ ಎಂದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.