ಫುಟ್‌ಬಾಲ್‌ ಟೂರ್ನಿ: ನೈಸ್‌ ಡಿಎಚ್‌ ಕಪ್‌ ಅನಾವರಣ ಬೆಂಗಳೂರು: ಕಾರ್ಪೊರೇಟ್‌ ಕಂಪನಿಗಳ ಕ್ರೀಡಾ ಪ್ರತಿಭೆಗಳಿಗೆ ಸಾಮರ್ಥ್ಯ ತೋರಿಸಲು ವೇದಿಕೆಯಾಗಿರುವ ‘ನೈಸ್‌ ಡಿಎಚ್‌ ಕಪ್‌ ಕಾರ್ಪೊರೇಟ್‌ ಫೈವ್ ಎ ಸೈಡ್‌ ಫುಟ್‌ಬಾಲ್ ಟೂರ್ನಿ’ಯಲ್ಲಿ 10 ತಂಡಗಳು ಪ್ರಶಸ್ತಿಗೆ ಪೈಪೋಟಿ ನಡೆಸಲಿವೆ. ಇದೇ ಮೊದಲ ಬಾರಿ ಆಯೋಜಿ ಸಿರುವ ಟೂರ್ನಿಗೆ ಇಲ್ಲಿನ ಇಂದಿರಾನಗರದಲ್ಲಿರುವ ಬಫೆಲೊ ವೈಲ್ಡ್‌ ವಿಂಗ್ಸ್‌ನಲ್ಲಿ ಶನಿವಾರ ಚಾಲನೆ ನೀಡಲಾಯಿತು. ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮನ್ ಶಂಕರ್‌ ಮತ್ತು ಭಾರತ ಮಹಿಳಾ ಫುಟ್‌ಬಾಲ್‌ ತಂಡದ ಮಾಜಿ ನಾಯಕಿ ಚಿತ್ರಾ ಗಂಗಾಧರನ್‌ ಅವರು ರೋಲಿಂಗ್‌ ಟ್ರೋಫಿ ಹಾಗೂ ತಂಡಗಳ ಜೆರ್ಸಿ ಅನಾವರಣಗೊಳಿಸಿದರು. ಟೂರ್ನಿಯಲ್ಲಿ ಅಡೋಬಿ, ಬಾಷ್‌, ಎಪ್ಸಿಲಾನ್‌, ಎಚ್‌ಎಲ್‌ ಕ್ಲೆಮೊವ್, ವಿಸೆನ್‌, ಐಕ್ವಿಯಾ, ಪುರವಂಕರ, ಸ್ವಿಸ್‌ ರೆ, ತಾವಂತ್‌ ಮತ್ತು ಟೈಟನ್ ತಂಡಗಳು ಭಾಗವಹಿಸಲಿವೆ. ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್‌ ಎಂಟರ್‌ಪ್ರೈಸಸ್‌ (ನೈಸ್‌) ಕಂಪನಿ ಈ ಟೂರ್ನಿಯ ‘ಟೈಟಲ್‌ ಪ್ರಾಯೋಜಕತ್ವ’ ವಹಿಸಿಕೊಂಡಿದೆ. ವಾರಾಂತ್ಯದಲ್ಲಿ ನಡೆಯುವ ಟೂರ್ನಿಯ ಪಂದ್ಯಗಳು ನ.19 ರಿಂದ ಆರಂಭವಾಗಲಿವೆ. ‘ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿ ಪತ್ರಿಕೆಗಳ 75ನೇ ವರ್ಷಾಚರಣೆ ಸಮಯದಲ್ಲೇ ಈ ಟೂರ್ನಿಗೆ ಚಾಲನೆ ನೀಡಲಾಗಿದೆ. ಈ ವರ್ಷ 10 ತಂಡಗಳು ಪಾಲ್ಗೊಳ್ಳುತ್ತಿದ್ದು, ಮುಂದಿನ ವರ್ಷದಿಂದ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು’ ಎಂದು ಸೀತಾರಾಮನ್‌ ಶಂಕರ್‌ ಹೇಳಿದರು. ಮಹಿಳಾ ಫುಟ್‌ಬಾಲ್‌ಗೆ ಉತ್ತೇಜನ ಸಿಗಲಿ: ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಭಾರತ ಮಹಿಳಾ ಫುಟ್‌ಬಾಲ್‌ ತಂಡದ ಮಾಜಿ ನಾಯಕಿ ಚಿತ್ರಾ ಗಂಗಾಧರನ್‌ ಮಾತನಾಡಿ, ‘ನಮ್ಮ ದೇಶದಲ್ಲಿ ಫುಟ್‌ಬಾಲ್‌ನತ್ತ ಆಸಕ್ತಿ ತೋರುತ್ತಿರುವ ಹೆಣ್ಣುಮಕ್ಕಳಿಗೆ ಕೊರತೆಯಿಲ್ಲ. ಆದರೆ ಅವರಲ್ಲಿ ಹಲವರಿಗೆ ಶೂ ಖರೀದಿಸಲೂ ಹಣ ಇಲ್ಲ. ಕಾರ್ಪೊರೇಟ್‌ ಕಂಪನಿಗಳು 2–3 ಪ್ರತಿಭಾನ್ವಿತ ಆಟಗಾರ್ತಿಯರನ್ನು ದತ್ತು ತೆಗೆದುಕೊಳ್ಳಲು ಮುಂದಾಗಬೇಕು’ ಎಂದರು. ಫಿಟ್‌ನೆಸ್‌ ಟ್ರೇನರ್‌ ಗುಲ್‌ ಮೊಹಮ್ಮದ್‌ ಅಕ್ಬರ್‌ ಪಾಲ್ಗೊಂಡರು. ಆಪಾ, ಬಾಡಿಕೋಟ್‌ (ಎಕೆಬಿ ಮೋಟರ್ಸ್‌), ಬಫೆಲೊ ವೈಲ್ಡ್‌ ವಿಂಗ್ಸ್, ಹಾಗೆನ್‌ ದಾಸ್ (ಎಕೆಬಿ ಫುಡ್ಸ್‌), ಪ್ಲೇಟೊ, ಪೋಪೈಸ್, ರೇರ್‌ ರ‍್ಯಾಬಿಟ್, ದಿ ಸ್ಕಿನ್‌ ಸ್ಟೋರ್‌.ಇನ್, ಯೋಗಾ ಬಾರ್ ಮತ್ತು ಜೈನ್‌ ಸಮೂಹದ ದಿ ಸ್ಪೋರ್ಟ್ಸ್‌ ಸ್ಕೂಲ್‌ ಟೂರ್ನಿಯ ಸಹಪ್ರಾಯೋಜಕತ್ವ ವಹಿಸಿಕೊಂಡಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.