ಐಎಸ್‌ಎಲ್‌: ಬಿಎಫ್‌ಸಿಗೆ ಲಯ ಕಂಡುಕೊಳ್ಳುವ ಸವಾಲು ಮುಂಬೈ: ಹ್ಯಾಟ್ರಿಕ್‌ ಸೋಲಿನಿಂದ ಕಂಗೆಟ್ಟಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡವು ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಗುರುವಾರ ಮುಂಬೈ ಸಿಟಿ ಎಫ್‌ಸಿ ಸವಾಲು ಎದುರಿಸಲಿದೆ. ಇಲ್ಲಿಯ ಮುಂಬೈ ಫುಟ್‌ಬಾಲ್‌ ಅರೆನಾದಲ್ಲಿ ಉಭಯ ತಂಡಗಳ ಮಧ್ಯೆ ಸೆಣಸಾಟ ನಡೆಯಲಿದೆ. ಟೂರ್ನಿಯಲ್ಲಿ ಇದುವರೆಗೆ ಐದು ಪಂದ್ಯಗಳನ್ನು ಆಡಿರುವ ಬಿಎಫ್‌ಸಿ ಕೇವಲ ಒಂದರಲ್ಲಿ ಗೆಲುವು ಸಾಧಿಸಿದೆ. ಒಂದು ಹಣಾಹಣಿಯಲ್ಲಿ ಡ್ರಾ ಮತ್ತು ಮೂರು ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದೆ. ಹೀಗಾಗಿ ಲಯ ಕಂಡುಕೊಳ್ಳುವ ಸವಾಲು ತಂಡದ ಮುಂದಿದೆ. ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ತಾನಾಡಿದ ಕೊನೆಯ ಮೂರು ಪಂದ್ಯಗಳನ್ನು ಕ್ರಮವಾಗಿ ಹೈದರಾಬಾದ್‌, ಒಡಿಶಾ ಮತ್ತು ಈಸ್ಟ್ ಬೆಂಗಾಲ್‌ ಎದುರು ಕೈಚೆಲ್ಲಿತ್ತು. ‘ನಮ್ಮ ಆಟಗಾರರ ಮೇಲೆ ನಂಬಿಕೆಯಿದೆ. ಕಠಿಣ ಪರಿಶ್ರಮದಿಂದ ನಾವು ಟೂರ್ನಿಯಲ್ಲಿ ಪುಟಿದೇಳಲಿದ್ದೇವೆ‘ ಎಂದು ಬಿಎಫ್‌ಸಿ ಕೋಚ್‌ ಸೈಮನ್ ಗ್ರೇಸನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಐದು ಪಂದ್ಯಗಳು ಸೇರಿ ಬಿಎಫ್‌ಸಿ ಆಟಗಾರರು ಕೇವಲ ಎರಡು ಗೋಲು ದಾಖಲಿಸಿದ್ದಾರೆ. ಆದರೆ ಮುಂಬೈ ಆಟಗಾರರು ಆರು ಪಂದ್ಯಗಳಿಂದ 16 ಬಾರಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದ್ದಾರೆ. ಹೀಗಾಗಿ ಮುಂಬೈ ತಂಡವು ಚೆಟ್ರಿ ಪಡೆಗೆ ಕಠಿಣ ಸವಾಲಾಗುವುದು ಖಚಿತ. ಪಂದ್ಯ ಆರಂಭ: ರಾತ್ರಿ 7.30 ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಆ್ಯಪ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.