ಫುಟ್‌ಬಾಲ್‌ | ‘ಹ್ಯಾಂಡ್ ಆಫ್‌ ಗಾಡ್’ ಚೆಂಡಿಗೆ ₹ 19.53 ಕೋಟಿ! ಲಂಡನ್‌: ಅರ್ಜೆಂಟೀನಾದ ಫುಟ್‌ಬಾಲ್‌ ದಂತಕತೆ ಡೀಗೊ ಮರಡೋನಾ ಅವರಿಗೆ 1986ರ ವಿಶ್ವಕಪ್‌ನಲ್ಲಿ ‘ಹ್ಯಾಂಡ್ ಆಫ್‌ ಗಾಡ್’ (ದೇವರ ಕೈ) ಗೋಲು ತಂದುಕೊಟ್ಟ ಚೆಂಡು ಹರಾಜಿನಲ್ಲಿ ₹ 19.53 ಕೋಟಿ ಮೊತ್ತಕ್ಕೆ ಮಾರಾಟವಾಗಿದೆ. ‘ಅಡಿಡಾಸ್‌’ ಕಂಪನಿಯ ಈ ಬಿಳಿ ಬಣ್ಣದ ಚೆಂಡು ಟ್ಯುನೀಷಿಯಾದ ರೆಫರಿ ಅಲಿ ಬಿನ್‌ ನಾಸೆರ್‌ ಅವರ ಸುಪರ್ದಿಯಲ್ಲಿತ್ತು. ಬ್ರಿಟನ್‌ನ ಗ್ರಹಾಂ ಬಡ್‌ ಹರಾಜು ಸಂಸ್ಥೆಯ ಮೂಲಕ ಅವರು ಚೆಂಡನ್ನು ಹರಾಜಿಗೆ ಇಟ್ಟಿದ್ದರು. 1986ರ ಫಿಫಾ ವಿಶ್ವಕಪ್‌ನ ಅರ್ಜೆಂಟೀನಾ– ಇಂಗ್ಲೆಂಡ್‌ ನಡುವಣ ಕ್ವಾರ್ಟರ್ ಫೈನಲ್‌ನಲ್ಲಿ ‘ಹ್ಯಾಂಡ್‌ ಆಫ್‌ ಗಾಡ್‌’ ಗೋಲು ದಾಖಲಾಗಿತ್ತು. ಮರಡೋನಾ ಅವರು ಚೆಂಡನ್ನು ಹೆಡ್‌ ಮಾಡುವ ವೇಳೆ ಮೆಲ್ಲನೆ ಎಡಗೈನಿಂದ ಸವರಿ ಗೋಲು ಪೆಟ್ಟಿಗೆ ಸೇರಿಸಿಬಿಟ್ಟಿದ್ದರು. ಇದು ರೆಫರಿ ಬಿನ್‌ ನಾಸೆರ್‌ ಗಮನಕ್ಕೆ ಬರದ ಕಾರಣ ಗೋಲು ಎಂದು ತೀರ್ಪು ಕೊಟ್ಟಿದ್ದರು. ‘ಚೆಂಡು ಕೈಗೆ ಸವರಿತ್ತು’ ಎಂಬುದನ್ನು ಮರಡೋನಾ ಆ ಬಳಿಕ ಬಹಿರಂಗಪಡಿಸಿದ್ದರು. ಈ ಪಂದ್ಯವನ್ನು ಅರ್ಜೆಂಟೀನಾ 2–1 ಗೋಲುಗಳಿಂದ ಜಯಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.