ಶುಭಾರಂಭದ ನಿರೀಕ್ಷೆಯಲ್ಲಿ ಕತಾರ್‌ ದೋಹಾ: ಫಿಫಾ ವಿಶ್ವಕಪ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ಎದುರಾಗಲಿದ್ದು, ಉಭಯ ತಂಡಗಳು ಶುಭಾರಂಭದ ನಿರೀಕ್ಷೆಯಲ್ಲಿವೆ. ಅಲ್‌ ಬೈತ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ‘ಎ’ ಗುಂಪಿನ ಪಂದ್ಯದಲ್ಲಿ ಗೆದ್ದರಷ್ಟೇ, ನಾಕೌಟ್‌ ಹಂತ ಪ್ರವೇಶಿಸುವ ಸಾಧ್ಯತೆಗೆ ಬಲ ಬರಲಿದೆ ಎಂಬುದರ ಅರಿವು ಎರಡೂ ತಂಡಗಳಿಗೆ ಇವೆ. ಏಕೆಂದರೆ ಆಫ್ರಿಕನ್‌ ಚಾಂಪಿಯನ್‌ ಸೆನೆಗಲ್‌ ಮತ್ತು ನೆದರ್ಲೆಂಡ್ಸ್‌ ತಂಡಗಳು ‘ಎ’ ಗುಂಪಿನಲ್ಲಿವೆ. ಅವುಗಳ ಸವಾಲು ಮೀರಿ ನಿಲ್ಲುವುದು ಅಷ್ಟು ಸುಲಭವಲ್ಲ. ಪ್ರತಿ ಗುಂಪಿನಿಂದ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಮಾತ್ರ ನಾಕೌಟ್‌ ಹಂತ ಪ್ರವೇಶಿಸಲಿವೆ. ಭಾನುವಾರ ಗೆದ್ದು ಪಾಯಿಂಟ್ಸ್‌ ಖಾತೆ ತೆರೆಯುವುದು ಉಭಯ ತಂಡಗಳ ಗುರಿ. ಇವೆರಡು ತಂಡಗಳು ಫಿಫಾ ರ‍್ಯಾಂಕಿಂಗ್‌ನಲ್ಲಿ ಕ್ರಮವಾಗಿ 50 ಹಾಗೂ 44ನೇ ಸ್ಥಾನದಲ್ಲಿವೆ. ಈಕ್ವೆಡಾರ್‌ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆಯಾದರೂ, ಕತಾರ್‌ ಅಚ್ಚರಿಯ ಫಲಿತಾಂಶವನ್ನು ಎದುರುನೋಡುತ್ತಿದೆ. ವಿಶ್ವಕಪ್‌ಗೆ ಆತಿಥ್ಯ ವಹಿಸಿದ್ದ ಯಾವುದೇ ದೇಶಗಳು ಮೊದಲ ಪಂದ್ಯವನ್ನು ಸೋತಿಲ್ಲ. ಆ ಸಂಪ್ರದಾಯವನ್ನು ಮುಂದುವರಿಸಬೇಕಾದ ಸವಾಲು ಕತಾರ್‌ ಮುಂದಿದೆ. ಟೂರ್ನಿಗೆ ಆತಿಥ್ಯ ವಹಿಸಿರುವುದರಿಂದ ಕತಾರ್‌, ವಿಶ್ವಕಪ್‌ಗೆ ನೇರ ಅರ್ಹತೆ ಪಡೆದುಕೊಂಡಿದೆ. ಆದರೆ ಈಕ್ವೆಡಾರ್ ತಂಡ, ದಕ್ಷಿಣ ಅಮೆರಿಕದ ಅತ್ಯಂತ ಕಠಿಣ ಅರ್ಹತಾ ಹಂತವನ್ನು ದಾಟಿ ಬಂದಿದೆ. ತವರು ನೆಲದ ಪ್ರೇಕ್ಷಕರ ಬೆಂಬಲದೊಂದಿಗೆ ಆಡಲಿರುವುದು ಕತಾರ್‌ಗೆ ನೆರವಾಗಬಹುದು. 2019ರ ಏಷ್ಯಾ ಕಪ್‌ ಚಾಂಪಿಯನ್‌ ಆಗಿರುವ ಈ ತಂಡ, ಸ್ಟ್ರೈಕರ್‌ಗಳಾದ ಅಕ್ರಮ್‌ ಅಫೀಫ್ ಮತ್ತು ಅಲ್ಮೋಜ್‌ ಅಲಿ ಅವರನ್ನು ನೆಚ್ಚಿಕೊಂಡಿದೆ. ‘ಕತಾರ್‌ ವಿಶ್ವಕಪ್‌ ಗೆಲ್ಲುವ ಬಗ್ಗೆ ನಾನು ಮಾತನಾಡುತ್ತಿಲ್ಲ. ಲೀಗ್ ಹಂತದ ಮೂರೂ ಪಂದ್ಯಗಳಲ್ಲಿ ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡುವುದು ನಮ್ಮ ಗುರಿ’ ಎಂದು ಕೋಚ್‌ ಫೆಲಿಕ್ಸ್ ಸ್ಯಾಂಚೆಜ್‌ ಹೇಳಿದ್ದಾರೆ. ಮಿಡ್‌ಫೀಲ್ಡರ್‌ ಮೊಯಿಸೆಸ್ ಕೈಸೆಡೊ, ಸ್ಟ್ರೈಕರ್‌ಗಳಾದ ಮೈಕಲ್‌ ಎಸ್ಟ್ರಾಡ ಮತ್ತು ಎನೆರ್ ವಲೆನ್ಸಿಯಾ ಅವರು ಈಕ್ವೆಡಾರ್‌ನ ಬಲ ಎನಿಸಿಕೊಂಡಿದ್ಧಾರೆ. ಕೈಸೆಡೊ ಅವರು ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಕ್ಲಬ್‌ ಬ್ರೈಟನ್‌ ಪರ ಆಡುತ್ತಿದ್ದಾರೆ. ‘ನಮ್ಮ ಮೇಲೆ ನಂಬಿಕೆಯಿಡಿ. ಕಠಿಣ ತರಬೇತಿ ನಡೆಸಿ ವಿಶ್ವಕಪ್‌ಗೆ ಬಂದಿದ್ದೇವೆ. ಇಡೀ ದೇಶದ ಜನರಿಗೆ ಸಂತಸ ಕೊಡುವ ಸಾಮರ್ಥ್ಯ ಹೊಂದಿದ್ದೇವೆ’ ಎಂಬುದು ವಲೆನ್ಸಿಯಾ ಅವರ ಆತ್ಮವಿಶ್ವಾಸದ ನುಡಿ. ಈಕ್ವೆಡಾರ್‌ ತಂಡಕ್ಕೆ ಇದು ನಾಲ್ಕನೇ ವಿಶ್ವಕಪ್‌ ಟೂರ್ನಿ. ಒಮ್ಮೆ ಮಾತ್ರ ನಾಕೌಟ್‌ ಹಂತ ಪ್ರವೇಶಿಸಿದೆ. 2006ರ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿತ್ತು. ಪಂದ್ಯ ಆರಂಭ: ರಾತ್ರಿ 9.30 (ಭಾರತೀಯ ಕಾಲಮಾನ) ನೇರ ಪ್ರಸಾರ: ಸ್ಪೋರ್ಟ್ಸ್ 18, ಜಿಯೊ ಸಿನೆಮಾ, ಎಂಟಿವಿ ****** ಬಲಾಬಲ ಉಭಯ ತಂಡಗಳು ಇದುವರೆಗೆ ಮೂರು ಸಲ ಎದುರಾಗಿದ್ದು, ತಲಾ ಒಂದರಲ್ಲಿ ಗೆದ್ದು ಸಮಬಲ ಸಾಧಿಸಿವೆ. ಇನ್ನೊಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. 2018 ರಲ್ಲಿ ದೋಹಾದಲ್ಲಿ ಕೊನೆಯ ಬಾರಿ ಎದುರಾಗಿದ್ದಾಗ ಕತಾರ್‌ 4–3 ಗೋಲುಗಳಿಂದ ಜಯಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.