ಫುಟ್‌ಬಾಲ್ ವಿಶ್ವಕ‍ಪ್‌: ಅರ್ಜೆಂಟೀನಾಕ್ಕೆ ಆಘಾತ ನೀಡಿದ ಸೌದಿ ಅರೇಬಿಯಾ ಲುಸೈಲ್‌, ಕತಾರ್‌: ಆಧುನಿಕ ಫುಟ್‌ಬಾಲ್‌ನ ದಿಗ್ಗಜ ಆಟಗಾರ ಲಯೊನೆಲ್‌ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವನ್ನು ಮಣಿಸಿದ ಸೌದಿ ಅರೇಬಿಯಾ, ಫಿಫಾ ವಿಶ್ವಕಪ್‌ ಟೂರ್ನಿಯ ಇತಿಹಾಸದಲ್ಲಿ ಬಲುದೊಡ್ಡ ಅಚ್ಚರಿಗೆ ಕಾರಣವಾಯಿತು. ಲುಸೈಲ್‌ ಕ್ರೀಡಾಂಗಣದಲ್ಲಿ ನೆರೆದಿದ್ದ 88 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಮುಂದೆ ಮಂಗಳವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಮರುಭೂಮಿಯ ನಾಡಿನ ತಂಡ ದಕ್ಷಿಣ ಅಮೆರಿಕದ ‘ಫುಟ್‌ಬಾಲ್‌ ದೈತ್ಯ’ ತಂಡವನ್ನು 2–1 ಗೋಲುಗಳಿಂದ ಪರಾಭವಗೊಳಿಸಿತು. ವಿಶ್ವಕಪ್‌ ಟೂರ್ನಿಯ ಇತಿಹಾಸದಲ್ಲಿ ದಾಖಲಾದ ಅತಿದೊಡ್ಡ ಅಚ್ಚರಿಗಳಲ್ಲಿ ಈ ಪಂದ್ಯವೂ ಒಂದು ಎಂದು ವಿಶ್ಲೇಷಿಸಲಾಗಿದೆ. ಸಲೇಹ್ ಅಲ್‌ ಶೆಹ್ರಿ (48ನೇ ನಿ.) ಮತ್ತು ಸಲೇಮ್‌ ಅಲ್‌ ದೌಸರಿ (53ನೇ ನಿ.) ಅವರು ಗೋಲು ಗಳಿಸಿ, ಸೌದಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ಅರ್ಜೆಂಟೀನಾ ತಂಡದ ಏಕೈಕ ಗೋಲನ್ನು ಮೆಸ್ಸಿ ಅವರು ಪೆನಾಲ್ಟಿ ಕಿಕ್‌ ಅವಕಾಶದಲ್ಲಿ 10ನೇ ನಿಮಿಷದಲ್ಲಿ ಗಳಿಸಿದರು. ನಾಲ್ಕು ವಿಶ್ವಕಪ್‌ ಟೂರ್ನಿಗಳಲ್ಲಿ ಗೋಲು ಗಳಿಸಿದ ಅರ್ಜೆಂಟೀನಾದ ಮೊದಲ ಆಟಗಾರ ಎಂಬ ಗೌರವ ಅವರಿಗೆ ಒಲಿಯಿತು. ಕೊನೆಯ ವಿಶ್ವಕಪ್‌ ಆಡುತ್ತಿರುವ ಮೆಸ್ಸಿಗೆ ಟ್ರೋಫಿ ಗೆದ್ದುಕೊಡಬೇಕೆಂಬ ಗುರಿಯೊಂದಿಗೆ ಅರ್ಜೆಂಟೀನಾ ತಂಡ ಕತಾರ್‌ಗೆ ಬಂದಿದೆ. ಮೊದಲ ಪಂದ್ಯದಲ್ಲೇ ಸೋಲು ಎದುರಾದದ್ದು ಆ ತಂಡದ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿತು. ಮೊದಲ ಅವಧಿಯ ಆಟದಲ್ಲಿ ಅರ್ಜೆಂಟೀನಾ ಮೇಲುಗೈ ಸಾಧಿಸಿತ್ತು. ಮೆಸ್ಸಿ ಅವರು ತಮ್ಮ ತಂಡಕ್ಕೆ ಲಭಿಸಿದ ಪೆನಾಲ್ಟಿ ಕಿಕ್‌ನಲ್ಲಿ ಗೋಲು ಗಳಿಸಿದರು. ವಿರಾಮದ ವೇಳೆಗೆ ತಂಡ 1–0 ರಲ್ಲಿ ಮುನ್ನಡೆಯಲ್ಲಿತ್ತು. ಆದರೆ ಫಿಫಾ ರ್‍ಯಾಂಕಿಂಗ್ ಪಟ್ಟಿಯಲ್ಲಿ 51ನೇ ಸ್ಥಾನದಲ್ಲಿರುವ ಸೌದಿ, ಮೂರನೇ ಸ್ಥಾನದಲ್ಲಿರುವ ಅರ್ಜೆಂಟೀನಾಕ್ಕೆ ದ್ವಿತೀಯಾರ್ಧದಲ್ಲಿ ತಿರುಗೇಟು ನೀಡಿತು. ಅರ್ಜೆಂಟೀನಾ ರಕ್ಷಣಾ ವಿಭಾಗದ ದೌರ್ಬಲ್ಯದ ಲಾಭ ಪಡೆದ ಶೆಹ್ರಿ ಮತ್ತು ದೌಸರಿ ಆರು ನಿಮಿಷಗಳಲ್ಲಿ ಎರಡು ಗೋಲು ಗಳಿಸಿ ಕ್ರೀಡಾಂಗಣದಲ್ಲಿ ಭಾರಿ ಸಂಂಖ್ಯೆಯಲ್ಲಿ ನೆರೆದಿದ್ದ ತಮ್ಮ ದೇಶದ ಬೆಂಬಲಿಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಆ ಬಳಿಕ ಅರ್ಜೆಂಟೀನಾ ಆಟಗಾರರು ಚೆಂಡಿನ ಮೇಲೆ ಸಾಕಷ್ಟು ನಿಯಂತ್ರಣ ಸಾಧಿಸಿದರೂ ಗುರಿ ಸೇರಿಸಲು ವಿಫಲವಾದರು. ಪಂದ್ಯವನ್ನು ಕನಿಷ್ಠ ಡ್ರಾ ಮಾಡಿಕೊಂಡು ಅವಮಾನದಿಂದ ಪಾರಾಗಲು ಇನ್ನಿಲ್ಲದ ಪ್ರಯತ್ನ ನಡೆಸಿದರೂ, ಸೌದಿ ತಂಡದ ರಕ್ಷಣಾ ವಿಭಾಗ ಅವಕಾಶ ನೀಡಲಿಲ್ಲ. ರೆಫರಿ ಅಂತಿಮ ವಿಷಲ್‌ ಊದುತ್ತಿದ್ದಂತೆಯೇ ಸೌದಿ ಆಟಗಾರರು ಐತಿಹಾಸಿಕ ಗೆಲುವಿನ ಸಂಭ್ರಮ ಆಚರಿಸಿದರೆ, ಮೆಸ್ಸಿ ಹಾಗೂ ಸಹ ಆಟಗಾರರು ಗರಬಡಿದವರಂತೆ ನಿಂತುಬಿಟ್ಟರು. ಅರ್ಜೆಂಟೀನಾ ತನ್ನ ಮುಂದಿನ ಪಂದ್ಯಗಳಲ್ಲಿ ಪೋಲೆಂಡ್‌ ಮತ್ತು ಮೆಕ್ಸಿಕೊ ತಂಡಗಳನ್ನು ಎದುರಿಸಲಿದ್ದು, ನಾಕೌಟ್‌ ಹಂತ ಪ್ರವೇಶಿಸಬೇಕಾದರೆ ಎರಡೂ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ. ಈ ಸೋಲಿನೊಂದಿಗೆ ಅರ್ಜೆಂಟೀನಾ ತಂಡದ ಸತತ 36 ಪಂದ್ಯಗಳ ಅಜೇಯ ಓಟಕ್ಕೆ ತೆರೆಬಿತ್ತು. ಇಟಲಿಯ (37) ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟುವ ಅವಕಾಶವೂ ತಪ್ಪಿಹೋಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.