ಫುಟ್‌ಬಾಲ್‌: 365 ಎಫ್‌ಸಿ, ಆರ್‌ವಿ ಎಫ್‌ಸಿ ಜಯಭೇರಿ ಬೆಂಗಳೂರು: ಪ್ಲೇ 365 ಎಫ್‌ಸಿ ಮತ್ತು ಆರ್‌ವಿ ಎಫ್‌ಸಿ ತಂಡಗಳು ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯ ‘ಸಿ’ ಡಿವಿಷನ್ ಲೀಗ್‌ನಲ್ಲಿ ಕ್ರಮವಾಗಿ ಉತ್ತರ ವಲಯ ಮತ್ತು ದಕ್ಷಿಣ ವಲಯದ ಪರವಾಗಿ ಭರ್ಜರಿ ಜಯ ಸಾಧಿಸಿದವು. ಮಲ್ಲೇಶ್ವರ ಮೈದಾನದಲ್ಲಿ ನಡೆದ ಉತ್ತರ ವಲಯದ ‘ಐ’ ಗುಂಪಿನ ಪಂದ್ಯದಲ್ಲಿ ಪ್ಲೇ 365 ತಂಡ 4–2ರಲ್ಲಿ ಗೋಲ್ಡನ್ ಎಫ್‌ಸಿಯನ್ನು ಮಣಿಸಿತು. ಮೋಹನ್ (6ನೇ ನಿಮಿಷ), ಮಹೇಶ್‌ (14ನೇ ನಿ), ಸೌಬನ್ ಅಹಮ್ಮದ್ (56ನೇ ನಿ) ಮತ್ತು ಸಂಜಯ್ (60ನೇ ನಿ) ವಿಜಯಿ ತಂಡಕ್ಕಾಗಿ ಗೋಲು ಗಳಿಸಿದರು. ಎದುರಾಳಿ ತಂಡಕ್ಕಾಗಿ ಧನುಷ್ (3ನೇ ನಿ) ಮತ್ತು ಸತೀಶ್ (46ನೇ ನಿ) ಗೋಲು ಗಳಿಸಿದರು. ಕಾಫಿ ಲ್ಯಾಂಡ್ ಮತ್ತು ಬ್ಲ್ಯಾಕ್ ಪ್ಯಾಂಥರ್ಸ್ ನಡುವಿನ ಪಂದ್ಯ ಗೋಲುರಹಿತ ಡ್ರಾದಲ್ಲಿ ಮುಕ್ತಾಯಗೊಂಡಿತು. ರಾಮಮೂರ್ತಿ ನಗರ ಎಫ್‌ಸಿ 3–1ರಲ್ಲಿ ಯಲಹಂಕ ಎಫ್‌ಸಿಯನ್ನು ಸೋಲಿಸಿತು. ರಾಮಮೂರ್ತಿನಗರಕ್ಕಾಗಿ ಪವನ್ ಕುಮಾರ್ (2ನೇ ನಿ), ರುಯೇಶ್ (30ನೇ ನಿ) ಮತ್ತು ಜೀವೇಶ್ (58ನೇ ನಿ), ಯಲಹಂಕ ಪರವಾಗಿ ಶ್ರೀರಾಗ್ (52ನೇ ನಿ) ಗೋಲು ಗಳಿಸಿದರು. ಎಸ್‌ಯುಎಫ್‌ಸಿ ಮೈದಾನದಲ್ಲಿ ನಡೆದ ದಕ್ಷಿಣ ವಲಯದ ‘ಎಲ್‌’ ಗುಂಪಿನ ಹಣಾಹಣಿಯಲ್ಲಿ ಆರ್‌ವಿ ಎಫ್‌ಸಿ 5–1ರಲ್ಲಿ ಫ್ರೀಲ್ಯಾನ್ಸ್ ಎಫ್‌ಸಿನ್ನು ಸೋಲಿಸಿತು. ಆರ್‌ವಿಗಾಗಿ ಯಶ್ವಿಕ್ (4, 8, 17 ಮತ್ತು 34ನೇ ನಿ) ಹ್ಯಾಟ್ರಿಕ್‌ನೊಂದಿಗೆ ಮಿಂಚಿದರು. ಧನುಷ್ 29ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಫ್ರೀಲ್ಯಾನ್ಸ್‌ಗಾಗಿ ಜೆರೆಮಿಯಾ (19ನೇ ನಿ) ಗೋಲು ಗಳಿಸಿದರು. ಮಜಾಜ್‌ ಎಫ್‌ಸಿ (ಮುಹಮ್ಮದ್ 12ನೇ ನಿ) 1–0ಯಿಂದ ರೊನಾಲ್ಡೊ ಎಫ್‌ಸಿಯನ್ನು ಮಣಿಸಿ ನಾಕೌಟ್ ಹಂತಕ್ಕೆ ಪ್ರವೇಶಿಸಿತು. ‘ಎ’ ಗುಂಪಿನಲ್ಲಿ ಕ್ಯಾಪ್ ಲೈಫ್‌ ಎಫ್‌ಸಿ (ಜಿತಿನ್‌ ಬಿನು 29ನೇ ನಿ, ಹಿಜಾಜ್ 35ನೇ ನಿ) 2–0ಯಿಂದ ಜಯನಗರ ಎಫ್‌ಸಿಯನ್ನು ಮಣಿಸಿತು. ಡಿ.ಬಿ ಯುನೈಟೆಡ್ ಎಫ್‌ಸಿ (ರಂಜಿತ್ ಕುಮಾರ್ 13ನೇ ನಿ, ಮೆಲ್ವಿನ್ 53ನೇ ನಿ) ಎಚ್‌ಎಸ್‌ಆರ್ ಲೇಔಟ್ (ಸುಧೇಂದ್ರ 58ನೇ ನಿ) ಎದುರು ಗೆದ್ದಿತು. ‘ಎಲ್‌’ ಗುಂಪಿನಲ್ಲಿ ಆ್ಯಕ್ಟಿನ್ ಯೂನಿಯನ್ ಎಫ್‌ಸಿ (ಮಹಮ್ಮದ್ ಹ್ಯಾರಿಸ್ 30, 38ನೇ ನಿ, ಒಲೆಮ್ ಮೇಥಿ 35ನೇ ನಿ) ನ್ಯಾಷನಲ್ಸ್‌ ಎಫ್‌ಸಿಯನ್ನು 3–0ಯಿಂದ ಮಣಿಸಿತು. ಮಿಸಾಕ ಎಫ್‌ಸಿ 4–1ರಲ್ಲಿ ರಬ್ಬಾನಿ ಎಫ್‌ಸಿಯನ್ನು, ಬಾಶ್ ಎಫ್‌ಸಿಯ2–1ರಲ್ಲಿ ಇಂದಿರಾ ನಗರ್ ಎಫ್‌ಸಿಯನ್ನು ಸೋಲಿಸಿತು. ಬೆಂಗಳೂರು ಯಂಗ್‌ಸ್ಟರ್ಸ್‌ ಎಫ್‌ಸಿ ಮತ್ತು ಯಂಗ್ ಬ್ಲೂಸ್ ನಡುವಿನ ಪಂದ್ಯ 3–3ರಲ್ಲಿ ಡ್ರಾ ಆಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.