ನೇಷನ್ಸ್‌ ಲೀಗ್‌ನಲ್ಲಿ ಆಡುವ ಗುರಿ: ಲುಕಾ ಮಾಡ್ರಿಚ್ ದೋಹಾ (ಎಎಫ್‌ಪಿ/ ರಾಯಿಟರ್ಸ್‌): ಮುಂದಿನ ವರ್ಷ ಜೂನ್‌ ತಿಂಗಳಲ್ಲಿ ನಡೆಯಲಿರುವ ನೇಷನ್ಸ್‌ ಲೀಗ್‌ ಫೈನಲ್ಸ್‌ನಲ್ಲಿ ಆಡುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಕ್ರೊವೇಷ್ಯಾ ತಂಡದ ಮಿಡ್‌ಫೀಲ್ಡರ್‌ ಲುಕಾ ಮಾಡ್ರಿಚ್‌ ಹೇಳಿದ್ದಾರೆ. ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಕ್ರೊವೇಷ್ಯಾ ತಂಡ ಕಂಚಿನ ಪದಕ ಗೆಲ್ಲುವಲ್ಲಿ 37 ವರ್ಷದ ಮಾಡ್ರಿಚ್‌ ಪ್ರಮುಖ ಪಾತ್ರ ವಹಿಸಿದ್ದರು. ಮೂರನೇ ಸ್ಥಾನವನ್ನು ನಿರ್ಣಯಿಸಲು ಶನಿವಾರ ನಡೆದಿದ್ದ ಪಂದ್ಯದಲ್ಲಿ ಕ್ರೊವೇಷ್ಯಾ 2–1 ಗೋಲುಗಳಿಂದ ಮೊರೊಕ್ಕೊ ತಂಡವನ್ನು ಮಣಿಸಿತ್ತು. ತಮ್ಮ ಭವಿಷ್ಯದ ಕುರಿತು ಮಾಧ್ಯಮದವರ ಪ್ರಶ್ನೆಗೆ, ‘2024 ರಲ್ಲಿ ನಡೆಯುವ ಯೂರೊ ಕಪ್‌ವರೆಗೆ ತಂಡದಲ್ಲಿ ಆಡಲು ಸಾಧ್ಯವೇ ಎಂಬುದು ಗೊತ್ತಿಲ್ಲ. ಹಂತ ಹಂತವಾಗಿ ಒಂದೊಂದೇ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ನೇಷನ್ಸ್‌ ಕಪ್‌ ಟೂರ್ನಿಯವರೆಗೆ ಆಡಬೇಕು ಎಂಬುದು ನನ್ನ ಗುರಿ’ ಎಂದು ಉತ್ತರಿಸಿದ್ಧಾರೆ. ‘ರಾಷ್ಟ್ರೀಯ ತಂಡದ ಪರ ಆಡುವುದನ್ನು ಆನಂದಿಸುತ್ತಿದ್ದೇನೆ. ಉನ್ನತಮಟ್ಟದ ಪ್ರದರ್ಶನ ನೀಡಲು ನನಗೆ ಈಗಲೂ ಸಾಧ್ಯ’ ಎಂದಿದ್ದಾರೆ. ‘ಫಿಫಾ ಟೂರ್ನಿಯಲ್ಲಿ ಕಂಚಿನ ಪದಕದ ಸಾಧನೆ ನನಗೂ, ನಮ್ಮ ತಂಡಕ್ಕೂ ಮಹತ್ವದ್ದಾಗಿದೆ. ಜಾಗತಿಕ ಫುಟ್‌ಬಾಲ್‌ನಲ್ಲಿ ಕ್ರೊವೇಷ್ಯಾದ ಪಾತ್ರ ಪ್ರಮುಖವಾಗಿದೆ ಎಂಬುದನ್ನು ಈ ಮೂಲಕ ತೋರಿಸಿಕೊಟ್ಟಿದ್ದೇವೆ. ಕತಾರ್‌ನಿಂದ ಹೆಮ್ಮೆಯಿಂದಲೇ ತವರಿಗೆ ಮರಳುತ್ತಿದ್ದೇವೆ’ ಎಂದು ಹೇಳಿದ್ದಾರೆ. ‘ಇಲ್ಲಿ ಚಾಂಪಿಯನ್‌ ಆಗಬೇಕು ಎಂದು ಬಯಸಿದ್ದೆವು. ಆದರೆ ಚಿನ್ನದ ಪದಕದ ಸನಿಹ ಬಂದು ಎಡವಿದ್ದೇವೆ. ಫುಟ್‌ಬಾಲ್‌ನ ಪ್ರಬಲ ತಂಡಗಳ ಪಟ್ಟಿಯಲ್ಲಿ ಕ್ರೊವೇಷ್ಯಾ ಕೂಡಾ ಸ್ಥಾನ ಪಡೆದುಕೊಂಡಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಆಗಿದ್ದ ಕ್ರೊವೇಷ್ಯಾ, ಈ ಬಾರಿ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ಎದುರು ಸೋತಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.