ಕತಾರ್‌ ರಾಷ್ಟ್ರೀಯ ದಿನ: ವಿಶ್ವಕಪ್‌ನಲ್ಲಿ ಅರಬ್‌ ದೇಶಗಳ ಐತಿಹಾಸಿಕ ಸಾಧನೆ ದೋಹಾ: ಡಿಸೆಂಬರ್ 18ರ ಈ ಭಾನುವಾರ ಕತಾರ್‌ ದೇಶದ ರಾಷ್ಟ್ರೀಯ ದಿನ. ವಿಶ್ವಕಪ್‌ ಫೈನಲ್ ನಡೆದ ಈ ವಿಶೇಷ ದಿನದಂದು ಅರಬ್‌ ದೇಶಗಳಿಗೆ ಚಾಂಪಿಯನ್‌ ಮತ್ತು ರನ್ನರ್ಸ್ ಅಪ್‌ ತಂಡಗಳನ್ನು ಮಣಿಸಿದ ಹೆಮ್ಮೆ. ಈ ವಿಶ್ವಕಪ್‌ ಟೂರ್ನಿಯಲ್ಲಿ ಅರಬ್‌ ದೇಶಗಳು ಐತಿಹಾಸಿಕ ಸಾಧನೆ ಮಾಡಿವೆ. ಎಲ್ಲ ನಿರೀಕ್ಷೆಗಳನ್ನು ತಲೆಕೆಳಗು ಮಾಡಿದ್ದು ಮೊರೊಕ್ಕೊ. ವಿಶ್ವಕಪ್‌ ಸೆಮಿಫೈನಲ್ ತಲುಪಿದ ಮೊದಲ ಅರಬ್‌ ಮತ್ತು ಆಫ್ರಿಕನ್‌ ತಂಡ ಎನಿಸಿಕೊಂಡ ಅದು ಬೆಲ್ಜಿಯಂ, ಸ್ಪೇನ್‌ ಮತ್ತು ಪೋರ್ಚುಗಲ್‌ನಂತಹ ಪ‍್ರಮುಖ ತಂಡಗಳಿಗೆ ಸೋಲಿನ ಕಹಿ ಉಣಿಸಿತ್ತು. ನಾಲ್ಕರ ಘಟ್ಟದಲ್ಲಿ ಫ್ರಾನ್ಸ್‌ಗೆ ಮಣಿದಿದ್ದ ಮೊರೊಕ್ಕೊ, ಮೂರನೇ ಸ್ಥಾನದ ಪ್ಲೇ ಆಫ್‌ನಲ್ಲಿ ಕ್ರೊವೇಷ್ಯಾಗೆ ಸೋಲು ತನ್ನ ಅಭಿಯಾನ ಮುಗಿಸಿತ್ತು. ‘ಟೂರ್ನಿಯಲ್ಲಿ ನಮ್ಮ ತಂಡ ಹೋರಾಡಿದ ರೀತಿಯನ್ನು ದೇಶದ, ಆಫ್ರಿಕಾ ಮತ್ತು ಅರಬ್‌ ಅಭಿಮಾನಿಗಳು ಗಮನಿಸಿದ್ದಾರೆ. ನಾಲ್ಕು ವರ್ಷಗಳ ನಂತರ ಇದೇ ಲಯದೊಂದಿಗೆ ಮರಳುವೆವು‘ ಎಂದು ಮೊರೊಕ್ಕೊ ತಂಡದ ಕೋಚ್‌ ವಾಲಿದ್‌ ರೆಗ್ರಾಗು ಹೇಳುತ್ತಾರೆ. ಮತ್ತೊಂದು ದೊಡ್ಡ ಅಚ್ಚರಿಗೆ ಕಾರಣವಾದದ್ದು ಸೌದಿ ಅರೇಬಿಯಾ. ಗುಂಪು ಹಂತದ ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ತಂಡಕ್ಕೆ 2–1ರಿಂದ ಸೌದಿ ಆಘಾತ ನೀಡಿತ್ತು. ಮತ್ತೊಂದು ಗುಂಪಿನ ಹಣಾಹಣಿಯಲ್ಲಿ ಟ್ಯುನಿಷಿಯಾ ತಂಡವು ಫ್ರಾನ್ಸ್‌ಗೆ ಆಘಾತ ನೀಡಿತ್ತು. ಕತಾರ್‌ ವಿಶ್ವಕಪ್‌ಗೂ ಮುನ್ನ ಅರಬ್‌ನ ಎಂಟು ದೇಶಗಳು 73 ಪಂದ್ಯಗಳನ್ನು ಆಡಿ 10ರಲ್ಲಿ ಗೆಲುವು ಸಾಧಿಸಿದ್ದವು. ಆದರೆ ಈ ಟೂರ್ನಿಯಲ್ಲಿ 16 ಪಂದ್ಯಗಳನ್ನು ಆಡಿ ಐದು ಗೆಲುವು ಕಂಡಿವೆ. 1978ರಲ್ಲಿ ಟ್ಯುನಿಷಿಯಾ 3–1ರಿಂದ ಮೆಕ್ಸಿಕೊ ಎದುರು, 1982ರಲ್ಲಿ ಅಲ್ಜೀರಿಯಾ 2–1ರಿಂದ ಪಶ್ಚಿಮ ಜರ್ಮನಿ ವಿರುದ್ಧ, 1986ರಲ್ಲಿ ಮೊರೊಕ್ಕೊ 3–1ರಿಂದ ಪೋರ್ಚುಗಲ್ ವಿರುದ್ಧ, 1994ರಲ್ಲಿ ಸೌದಿ ಅರೇಬಿಯಾ 1–0ಯಿಂದ ಬೆಲ್ಜಿಯಂ ಎದುರು ಗೆದ್ದಿದ್ದು ಇದುವರೆಗೆ ವಿಶ್ವಕಪ್‌ನಲ್ಲಿ ಅರಬ್ ದೇಶಗಳ ಮಹತ್ವದ ಸಾಧನೆಯಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.