ಫಾರೂಕ್‌ ಆಟ: ಬಿಎಫ್‌ಸಿಗೆ ಜಯ ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಆಗಷ್ಟೇ ಆಸೀನರಾಗುತ್ತಿದ್ದ ಬೆಂಗಳೂರು ಎಫ್‌ಸಿ ಅಭಿಮಾನಿಗಳನ್ನು ಸಂಭ್ರಮದ ಅಲೆಯಲ್ಲಿ ತೇಲುವಂತೆ ಮಾಡಿದವರು ದಾನಿಶ್‌ ಫಾರೂಕ್.. ಇಲ್ಲಿ ನಡೆದ ಇಂಡಿಯನ್‌ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಹಣಾಹಣಿಯಲ್ಲಿ ಅವರು 5ನೇ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಬಿಎಫ್‌ಸಿ 1–0ಯಿಂದ ಜಮ್ಶೆಡ್‌ಪುರ ಎಫ್‌ಸಿ (ಜೆಎಫ್‌ಸಿ) ತಂಡಕ್ಕೆ ಸೋಲುಣಿಸಿತು. ಇದರೊಂದಿಗೆ ಸತತ ಸೋಲಿನಿಂದ ನಿರಾಸೆಯಲ್ಲಿದ್ದ ಅಭಿಮಾನಿಗಳನ್ನು ಸಂತಸದ ಕಡಲಿನಲ್ಲಿ ಮಿಂದೇಳುವಂತೆ ಮಾಡಿತು. ಚುರುಕಿನ ಆಟ: ಎಂಟೂವರೆ ಸಾವಿರಕ್ಕೂ ಅಧಿಕ ಪ್ರೇಕ್ಷಕರ ಎದುರು ನಡೆದ ಹಣಾಹಣಿಯ ಆರಂಭದಲ್ಲೇಬಿಎಫ್‌ಸಿ ಚುರುಕಿನ ಆಟಕ್ಕೆ ಮೊರೆಹೋಯಿತು. ಅದಕ್ಕೆ ಪ್ರತಿಫಲವನ್ನು ಪಡೆಯಿತು. ಬಿಎಫ್‌ಸಿ4–3–3 ಮಾದರಿಯಲ್ಲಿ ಆಟ ಆರಂಭಿಸಿತು. ತಂಡದ ಚೆಟ್ರಿ, ಜೇವಿಯರ್ ಹೆರ್ನಾಂಡೆಜ್ ಮತ್ತು ರಾಯ್‌ಕೃಷ್ಣ ಅವರು ಗೋಲು ಗಳಿಸುವ ಸುಂದರ ಅವಕಾಶ ಸೃಷ್ಟಿಸಿದರು. ಚೆಟ್ರಿ ಅವರಿಂದ ಚೆಂಡು ಪಡೆದ ಕೃಷ್ಣ ಅದನ್ನು ಫಾರೂಕ್ ಅವರತ್ತ ಸೊಗಸಾಗಿ ಕ್ರಾಸ್‌ ಮಾಡಿದರು. ಈ ವೇಳೆ ಮಿಂಚಿನ ವೇಗದಲ್ಲಿ ಫಾರೂಕ್‌ ಚೆಂಡನ್ನು ಗೋಲ್‌ಪೋಸ್ಟ್‌ಗೆ ಸೇರಿಸಿದರು. ಆರಂಭದಲ್ಲೇ ದೊರೆತ ಯಶಸ್ಸು ಚೆಟ್ರಿ ಬಳಗದಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಯಿತು. ಬಳಿಕ ನಿರಂತರವಾಗಿ ಜೆಎಫ್‌ಸಿ ಗೋಲ್‌ಪೋಸ್ಟ್‌ಅನ್ನು ಗುರಿಯಾಗಿಸಿ ಆಕ್ರಮಣ ಮಾಡಿತು. ಆದರೆ ಯಶಸ್ಸು ಸಾಧ್ಯವಾಗಲಿಲ್ಲ. ಪಂದ್ಯದುದ್ದಕ್ಕೂ ಹೆಚ್ಚಿನ ಅವಕಾಶಗಳು ದೊರೆತರೂ ಬಿಎಫ್‌ಸಿ ಕೂದಲೆಳೆ ಅಂತರದಲ್ಲಿ ಹಲವು ಗೋಲುಗಳನ್ನು ತಪ್ಪಿಸಿಕೊಂಡಿತು. ಆಟಗಾರರ ನಡುವಿನ ಹೊಂದಾಣಿಕೆ, ನಿಖರ ಪಾಸ್‌ಗಳು ಗಮನಸೆಳೆದವು. ಜೆಎಫ್‌ಸಿ ತಂಡದ ಕೆಲವು ಪ್ರಯತ್ನಗಳಿಗೆ ಬಿಎಫ್‌ಸಿ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ತಡೆಗೋಡೆಯಾದರು. ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರೂ ಮತ್ತೊಂದು ಗೋಲು ಸಾಧ್ಯವಾಗಲಿಲ್ಲ. ಪಂದ್ಯದ ಗೆಲುವಿನೊಂದಿಗೆ ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್‌ಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೇರಿತು. 10 ಪಂದ್ಯ ಆಡಿರುವ ತಂಡವು ಮೂರು ಗೆಲುವು, ಒಂದು ಡ್ರಾ ಮತ್ತು ಆರು ಪಂದ್ಯಗಳಲ್ಲಿ ಸೋಲು ಕಂಡಿದೆ. ಜಮ್ಶೆಡ್‌ಪುರ 10ನೇ ಸ್ಥಾನದಲ್ಲುಳಿಯಿತು. ಐದು ಹಳದಿ ಕಾರ್ಡ್‌: ಒರಟು ಆಟವಾಡಿದ ಕಾರಣ ಐವರು ಆಟಗಾರರಿಗೆ ರೆಫರಿ ಹಳದಿ ಕಾರ್ಡ್‌ ದರ್ಶನ ಮಾಡಿಸಿದರು. ಜಮ್ಶೆಡ್‌ಪುರ ತಂಡದ ಬೊರಿಸ್‌ ಸಿಂಗ್‌, ಪ್ರತೀಕ್ ಚೌಧರಿ, ಬೆಂಗಳೂರು ಎಫ್‌ಸಿಯ ಪರಾಗ್ ಶ್ರೀವಾಸ್‌, ರೋಹಿತ್ ಕುಮಾರ್ ಮತ್ತು ಸುರೇಶ್ ವಾಂಗ್‌ಜಮ್‌ ಹಳದಿ ಕಾರ್ಡ್ ಪಡೆದವರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.