: ಫೈನಲ್‌ ಕನಸಲ್ಲಿ ಅರ್ಜೆಂಟೀನಾ- ಕ್ರೊವೇಷ್ಯಾ ತಡೆ ದಾಟುವುದೇ ಮೆಸ್ಸಿ ಬಳಗ? ದೋಹಾ (ರಾಯಿಟರ್ಸ್‌/ ಎಪಿ): ಲಯೊನೆಲ್‌ ಮೆಸ್ಸಿ ಮತ್ತು ಅರ್ಜೆಂಟೀನಾ ತಂಡದ ವಿಶ್ವಕಪ್‌ ಟ್ರೋಫಿಯ ಕನಸು ಜೀವಂತವಾಗಿ ಉಳಿದುಕೊಂಡಿದೆ. ಆದರೆ ಲುಕಾ ಮಾಡ್ರಿಚ್‌ ಅವರನ್ನೊಳಗೊಂಡ ಕ್ರೊವೇಷ್ಯಾ ತಂಡ, ಸೆಮಿಫೈನಲ್‌ನಲ್ಲಿ ತಡೆಯಾಗಿ ನಿಂತಿದೆ. ಫಿಫಾ ವಿಶ್ವಕಪ್‌ ಟೂರ್ನಿಯ ನಾಲ್ಕರಘಟ್ಟದ ಹಣಾಹಣಿಯಲ್ಲಿ ಅರ್ಜೆಂಟೀನಾ –ಕ್ರೊವೇಷ್ಯಾ ತಂಡಗಳು ಮಂಗಳವಾರ ತಡರಾತ್ರಿ ಎದುರಾಗಲಿವೆ. ಲುಸೈಲ್‌ ಕ್ರೀಡಾಂಗಣದಲ್ಲಿ ನೆರೆಯಲಿರುವ 88 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಮುಂದೆ ನಡೆಯುವ ಪಂದ್ಯ, ಫುಟ್‌ಬಾಲ್‌ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ. ಆಧುನಿಕ ಫುಟ್‌ಬಾಲ್‌ನ ದಿಗ್ಗಜ ಆಟಗಾರರಾದ ನೇಮರ್‌ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ತಂಡಗಳು ಸೋತ ಕಾರಣ ಕಣ್ಣೀರು ಹಾಕುತ್ತಾ ಟೂರ್ನಿಗೆ ಗುಡ್‌ಬೈ ಹೇಳಿದ್ದಾರೆ. ಮೆಸ್ಸಿ ಅವರಿಗೆ ಅದೇ ಸಂಕಟ ಎದುರಾಗದಿರಲಿ ಎಂಬುದು ವಿಶ್ವದ ವಿವಿಧೆಡೆಯಿರುವ ಅವರ ಕೋಟ್ಯಾಂತರ ಅಭಿಮಾನಿಗಳ ಪ್ರಾರ್ಥನೆಯಾಗಿದೆ. ಆದರೆ, ಕಳೆದ ಬಾರಿಯ ರನ್ನರ್‌ ಅಪ್‌ ಕ್ರೊವೇಷ್ಯಾ ತಂಡದವರು ಮೆಸ್ಸಿ ಬಳಗವನ್ನು ಮನೆಗೆ ಕಳುಹಿಸಲು ಎಲ್ಲ ತಯಾರಿ ನಡೆಸಿದ್ದಾರೆ. ನೇಮರ್‌ ಅವರ ವಿಶ್ವಕಪ್‌ ಗೆಲ್ಲುವ ಕನಸನ್ನು ಕ್ವಾರ್ಟರ್‌ ಫೈನಲ್‌ನಲ್ಲಿ ನುಚ್ಚುನೂರು ಮಾಡಿರುವ ಕ್ರೊವೇಷ್ಯಾ, ಇನ್ನೊಬ್ಬ ಸ್ಟಾರ್‌ ಆಟಗಾರನಿಗೂ ನಿರಾಸೆ ಉಂಟುಮಾಡಬೇಕೆಂಬ ಛಲದೊಂದಿಗೆ ಕಣಕ್ಕಿಳಿಯಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ಎದುರು ಆಘಾತ ಅನುಭವಿಸಿದ್ದ ಅರ್ಜೆಂಟೀನಾ, ಆ ಬಳಿಕ ಪುಟಿದೆದ್ದು ನಿಂತಿದೆ. ನೆದರ್ಲೆಂಡ್ಸ್‌ ವಿರುದ್ಧದಕ್ವಾರ್ಟರ್‌ ಫೈನಲ್‌ ಪಂದ್ಯವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ರೋಚಕವಾಗಿ ಜಯಿಸಿತ್ತು. 'ಬ್ರೆಜಿಲ್‌ಗೆ ಸರಿಸಾಟಿಯಾಗಿ ನಿಂತ ಕ್ರೊವೇಷ್ಯಾ, ಬಲಿಷ್ಠ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಮಿಡ್‌ಫೀಲ್ಡ್‌ನಲ್ಲಿ ಆಡುವ ಎಲ್ಲ ಆಟಗಾರರೂ ಅತ್ಯುತ್ತಮ ಫಾರ್ಮ್‌ನಲ್ಲಿದ್ಧಾರೆ’ ಎಂದು ಮೆಸ್ಸಿ ಅವರು ಎದುರಾಳಿಗಳ ಬಗ್ಗೆ ಎಚ್ಚರಿಕೆಯ ಮಾತನ್ನಾಡಿದ್ದಾರೆ. ಅರ್ಜೆಂಟೀನಾ ಕೋಚ್‌ ಲಯೊನೆಲ್‌ ಸ್ಕಾಲೊನಿ ಅವರು ನೆದರ್ಲೆಂಡ್ಸ್‌ ವಿರುದ್ಧ ಐವರು ಡಿಫೆಂಡರ್‌ಗಳನ್ನು ಕಣಕ್ಕಿಳಿಸಿದ್ದರು. ಅದಕ್ಕಾಗಿ ಲಿಸಾಂಡ್ರೊ ಮಾರ್ಟಿನೆಜ್‌ ಅವರಿಗೆ ಅಂತಿಮ ಇಲೆವೆನ್‌ನಲ್ಲಿ ಸ್ಥಾನ ನೀಡಿದ್ದರು. ಮಿಡ್‌ಫೀಲ್ಡ್‌ನಲ್ಲಿ ಆಟವನ್ನು ನಿಯಂತ್ರಿಸುವ ಕ್ರೊವೇಷ್ಯಾ ವಿರುದ್ಧ ಅವರು ಯಾವ ತಂತ್ರ ಅನುಸರಿಸುವರು ಎಂಬುದನ್ನು ನೋಡಬೇಕು. 37 ವರ್ಷದ ಲುಕಾ ಮಾಡ್ರಿಚ್‌ ಅವರ ಅನುಭವ ಕ್ರೊವೇಷ್ಯಾಕ್ಕೆ ನೆರವಾಗಲಿದೆ. ಮಾಡ್ರಿಚ್‌ ಈ ಟೂರ್ನಿಯಲ್ಲಿ ಯಾವುದೇ ಗೋಲು ಗಳಿಸಿಲ್ಲ. ಮಾತ್ರವಲ್ಲ, ಇತರರ ಗೋಲಿಗೆ ‘ಅಸಿಸ್ಟ್‌’ ಕೂಡಾ ನೀಡಿಲ್ಲ. ಆದರೆ ಅವರ ಸಾನ್ನಿಧ್ಯ ತಂಡಕ್ಕೆ ಚೈತನ್ಯ ತುಂಬುತ್ತದೆ. ಮಾರ್ಸೆಲೊ ಬ್ರೊವಿಸಿಚ್‌ ಮತ್ತು ಮಟೆಯೊ ಕೊವಸಿಚ್‌ ಅವರೂ ಮಿಡ್‌ಫೀಲ್ಡ್‌ಗೆ ಬಲ ತುಂಬುವರು. ಉಭಯ ತಂಡಗಳು ಒಟ್ಟಾರೆಯಾಗಿ ಐದು ಸಲ ಪರಸ್ಪರ ಎದುರಾಗಿದೆಯಾದರೂ, ವಿಶ್ವಕಪ್‌ನಲ್ಲಿ ಎರಡು ಸಲ ಮಾತ್ರ ಸೆಣಸಾಟ ನಡೆಸಿವೆ. 1998ರ ಟೂರ್ನಿಯ ಲೀಗ್‌ ಹಂತದಲ್ಲಿ ಅರ್ಜೆಂಟೀನಾ 1–0 ರಲ್ಲಿ ಗೆದ್ದಿದ್ದರೆ, 2018ರ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಕ್ರೊವೇಷ್ಯಾ 3–0 ರಲ್ಲಿ ಜಯಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.