ಮುರ್ಷಿದ್‌ ಗೋಲು: ಯುನೈಟೆಡ್‌ಗೆ ಜಯ ಬೆಂಗಳೂರು: ಕೆ.ಪಿ.ಮುರ್ಷಿದ್‌ ಕಾಲ್ಚಳಕದಲ್ಲಿ ಅರಳಿದ ಏಕೈಕ ಗೋಲಿನ ಬಲದಿಂದ ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ ತಂಡ ಬಿಡಿಎಫ್‌ಎ ಆಶ್ರಯದ ಸೂಪರ್‌ ಡಿವಿಷನ್‌ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ. ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಹಣಾಹಣಿಯಲ್ಲಿ ಡ್ರೀಮ್‌ ಯುನೈಟೆಡ್‌ 1–0 ಗೋಲಿನಿಂದ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡವನ್ನು ಮಣಿಸಿತು. ಮೊದಲಾರ್ಧದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನಿಂದ ಸೆಣಸಿದವು. ವಿರಾಮದ ನಂತರ ಡ್ರೀಮ್‌ ಯುನೈಟೆಡ್‌ ತಂಡ ಪರಿಣಾಮಕಾರಿಯಾಗಿ ಆಡಿತು. ಮುರ್ಷಿದ್‌ 84ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ಎಎಸ್‌ಸಿ ಆ್ಯಂಡ್‌ ಸೆಂಟರ್‌ ಎಫ್‌ಸಿ ಮತ್ತು ಸೌತ್‌ ಯುನೈಟೆಡ್‌ ಎಫ್‌ಸಿ ನಡುವಣ ದಿನದ ಇನ್ನೊಂದು ಪಂದ್ಯ 1–1 ಗೋಲುಗಳಿಂದ ಸಮಬಲವಾಯಿತು. ಎಎಸ್‌ಸಿ ತಂಡದ ಜೊತಿನ್‌ ಸಿಂಗ್‌ 24ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಸೌತ್‌ ಯುನೈಟೆಡ್‌ ತಂಡದ ಲಾಲ್‌ನುಸಿಯಾಮಾ 41ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ವಿರಾಮದ ನಂತರ ಎರಡೂ ತಂಡಗಳು ಗೋಲು ಗಳಿಸಲು ನಡೆಸಿದ ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.