ಕಿಲಿಯನ್‌ ಬಲಕ್ಕೆ ಮೊರೊಕ್ಕೊ ಸವಾಲು ದೋಹಾ (ಎಪಿ/ಎಎಫ್‌ಪಿ/ರಾಯಿಟರ್ಸ್): ಅಚ್ಚರಿಯ ಮೂಟೆ ಹೊತ್ತು ಸಾಗಿರುವ ಮೊರೊಕ್ಕೊ ತಂಡವು ಕಿಲಿಯನ್‌ ಎಂಬಾಪೆ ಅವರನ್ನು ಕಟ್ಟಿಹಾಕುವುದೇ; ಸತತ ಎರಡನೇ ಟ್ರೋಫಿಯ ಕನಸು ಹೊತ್ತಿರುವ ಫ್ರಾನ್ಸ್‌ನ ಪ್ರಶಸ್ತಿ ಸುತ್ತು ತಲುಪುವ ಆಸೆ ಈಡೇರುವುದೇ? ಬುಧವಾರ ಅಲ್‌ಬೈತ್‌ ಕ್ರೀಡಾಂಗಣದಲ್ಲಿ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಈ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಭಾರೀ ಸಂಖ್ಯೆಯಲ್ಲಿ ಸೇರಲಿರುವಮೊರೊಕ್ಕೊ ಅಭಿ ಮಾನಿಗಳು ತಂಡಕ್ಕೆ ನೈತಿಕ ಬಲ ತುಂಬಲಿದ್ದಾರೆ. ಬೆಲ್ಜಿಯಂ, ಸ್ಪೇನ್‌ ಮತ್ತು ಪೋರ್ಚುಗಲ್‌ನಂತಹ ಪ್ರಮುಖ ತಂಡಗಳಿಗೆ ಸೋಲಿನ ರುಚಿ ತೋರಿಸಿರುವ ಮೊರೊಕ್ಕೊ ಇಲ್ಲಿ ಮತ್ತೊಂದು ಆಘಾತಕ್ಕೆ ಕಾರಣವಾದರೆ ಅಚ್ಚರಿಯಿಲ್ಲ.ಟೂರ್ನಿಯಲ್ಲಿ ಎದುರಾಳಿ ಆಟಗಾರರಿಗೆ ಒಂದೇ ಒಂದು ಗೋಲು ಗಳಿಸುವ ಅವಕಾಶ ನೀಡದ ಮೊರೊಕ್ಕೊ ಎದುರು ಫ್ರಾನ್ಸ್ ವಿಜೃಂಭಿಸುವುದೇ ಎಂಬುದು ಕುತೂಹಲದ ಸಂಗತಿಯಾಗಿದೆ. ಫಾರ್ವರ್ಡ್‌ ಆಟಗಾರ ಕಿಲಿಯನ್ ಎಂಬಾಪೆ ಅವರಲ್ಲದೆ, ಅಟ್ಯಾಕರ್‌ ಆ್ಯಂಟನಿ ಗ್ರಿಜ್‌ಮನ್‌, ಉಸ್ಮಾನ್ ದೆಂಬೆಲೆ, ಒಲಿವಿಯರ್ ಜಿರೋಡ್‌ ಕೂಡ ಫ್ರಾನ್ಸ್ ತಂಡದ ಶಕ್ತಿಯಾಗಿದ್ದಾರೆ. ಹಕೀಂ ಜಿಯೆಚ್‌, ಅಶ್ರಫ್‌ ಹಕೀಮಿ, ಸೋಫಿಯಾನ್‌ ಬೌಫಲ್‌ ಮತ್ತು ಯೂಸೆಫ್ ಎನ್‌ ನೆಸಿರಿ ಅವರು ಮೊರೊಕ್ಕೊ ತಂಡದ ಪ್ರಮುಖ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಹೀಗಾಗಿ ಉಭಯ ತಂಡಗಳ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದು. ಇದುವರೆಗಿನ ಪಂದ್ಯಗಳಲ್ಲಿ ಚುರುಕಿನ ದಾಳಿಯ ಮೂಲಕ ಅಪಾಯಕಾರಿಯಾಗಿ ಕಂಡುಬಂದಿರುವ ಮೊರೊಕ್ಕೊ ಈ ಹಣಾಹಣಿಯಲ್ಲಿ ಯಾವ ರೀತಿಯ ರಣತಂತ್ರ ರೂಪಿಸಲಿದೆ ಎಂಬುದನ್ನು ಕಾದುನೋಡಬೇಕಿದೆ. ‘ಮೊರೊಕ್ಕೊಗೆ ಇಲ್ಲಿ ಅಪಾರ ಬೆಂಬಲಿಗರಿದ್ದಾರೆ.ಪಂದ್ಯದ ವೇಳೆ ಜೋರಾದ ಶಿಳ್ಳೆ ಮತ್ತು ಕಿವಿ ಗಢಚಿಕ್ಕುವ ಚಪ್ಪಾ ಳೆಗಳುಸಾಮಾನ್ಯ. ಪಂದ್ಯಕ್ಕೆ ನಾವು ಕಾತರರಾಗಿದ್ದೇವೆ‘ ಎಂದು ಫ್ರಾನ್ಸ್ ಕೋಚ್‌ ಡಿಡಿಯರ್ ಡೆಸ್‌ಚಾಂಪ್ಸ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಗಾಯದ ಚಿಂತೆ: ಡಿಫೆನ್ಸ್ ಆಟಗಾರರಾದ ನಯೆಫ್‌ ಅಗುವೆರ್ಡ್‌ ಮತ್ತು ರೊಮೇನ್‌ ಸೈಸ್‌ ಗಾಯಗೊಂಡಿರುವುದು ಮೊರೊ ಕ್ಕೊ ತಂಡದ ಕಳವಳಕ್ಕೆ ಕಾರಣವಾಗಿದೆ. ಈ ಪಂದ್ಯದಲ್ಲಿ ಜಯಿಸಿದ ತಂಡವು ಫೈನಲ್‌ನಲ್ಲಿ, ಅರ್ಜೆಂಟೀನಾ ಮತ್ತು ಕ್ರೊವೇಷ್ಯಾ ನಡುವಣ ಇನ್ನೊಂದು ಸೆಮಿಫೈನಲ್‌ ವಿಜೇತರನ್ನು ಭಾನುವಾರ ಎದುರಿಸಲಿದೆ. ಪ್ರಮುಖ ಅಂಶಗಳು lಐದು ಪಂದ್ಯಗಳಲ್ಲಿ ಐದು ಗೋಲು ಗಳಿಸಿರುವ ಫ್ರಾನ್ಸ್ ತಂಡದ ಕಿಲಿಯನ್ ಎಂಬಾಪೆ. 23 ವರ್ಷದ ಆಟಗಾರ ವಿಶ್ವಕಪ್‌ನ ಒಟ್ಟು 12 ಪಂದ್ಯಗಳಲ್ಲಿ 9 ಬಾರಿ ಚೆಂಡನ್ನು ಗುರಿ ಸೇರಿಸಿದ್ದಾರೆ. lವಿಶ್ವಕಪ್ ಸೆಮಿಫೈನಲ್ ತಲುಪಿರುವ ಮೊದಲ ಆಫ್ರಿಕನ್‌ ಮತ್ತು ಅರಬ್ ತಂಡ ಎನಿಸಿರುವ ಮೊರೊಕ್ಕೊ ಮತ್ತೊಂದು ಪ್ರಮುಖ ಸಾಧನೆಯ ಹೊಸ್ತಿಲಲ್ಲಿದೆ. l24 ವರ್ಷಗಳ ಬಳಿಕ, ವಿಶ್ವಕಪ್ ಸೆಮಿಫೈನಲ್ ತಲುಪಿದ ಹಾಲಿ ಚಾಂಪಿಯನ್ ತಂಡ ಎನಿಸಿಕೊಂಡಿರುವ ಫ್ರಾನ್ಸ್. 1998ರಲ್ಲಿ ಬ್ರೆಜಿಲ್ ಈ ಸಾಧನೆ ಮಾಡಿತ್ತು. lಈ ವಿಶ್ವಕಪ್‌ನಲ್ಲಿ ಮೊರೊಕ್ಕೊ ತಂಡವು ಯಾವುದೇ ಎದುರಾಳಿ ಆಟಗಾರನಿಗೆ ಗೋಲು ಗಳಿಸುವ ಅವಕಾಶ ಬಿಟ್ಟುಕೊಟ್ಟಿಲ್ಲ. ಕೆನಡಾ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಮೊರೊಕ್ಕೊ ಡಿಫೆಂಡರ್‌ ನಯೆಫ್‌ ಅಗುಯೆರ್ಡ್‌ ಆಕಸ್ಮಿಕವಾಗಿ ತಮ್ಮದೇ ತಂಡದ ಗೋಲ್‌ಪೋಸ್ಟ್‌ಗೆ ಚೆಂಡು ಸೇರಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.