ಜೋರ್ಡಾನ್‌ ಮಿಂಚು: ಸೌತ್‌ ಯುನೈಟೆಡ್‌ಗೆ ಜಯ ಬೆಂಗಳೂರು: ಜೈಸನ್‌ ಜೋರ್ಡಾನ್‌ ಗಳಿಸಿದ ಎರಡು ಗೋಲುಗಳ ಬಲದಿಂದ ಸೌತ್‌ ಯುನೈಟೆಡ್‌ ಎಫ್‌ಸಿ ತಂಡವು ಎಜಿಒಆರ್‌ಸಿ ಎಫ್‌ಸಿ ಎದುರು 4–0ಯಿಂದ ಗೆದ್ದಿತು. ಬಿಡಿಎಫ್‌ಎ ಆಶ್ರಯದಲ್ಲಿ ಜಾರ್ಜ್‌ ಹೂವರ್‌ ಹಾಗೂ ಜಿ.ಎಂ.ಬಾಷಾ ಕಪ್‌ಗಾಗಿ ನಡೆಯುತ್ತಿರುವ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ನಲ್ಲಿ ಮಂಗಳವಾರ ವಿಜೇತ ತಂಡದ ಜೋರ್ಡಾನ್ 4 ಹಾಗೂ 80ನೇ ನಿಮಿಷ ಗೋಲು ದಾಖಲಿಸಿದರು. ಸತೀಶ್‌ ಕುಮಾರ್‌ ಮತ್ತೊಂದು ಗೋಲು (90+ನೇ ನಿಮಿಷ) ದಾಖಲಿಸಿದರೆ, ಎಜಿಒಆರ್‌ಸಿ ಎಫ್‌ಸಿಯ ಅವಿನಾಶ್‌ 27ನೇ ನಿಮಿಷದಲ್ಲಿ ಉಡುಗೊರೆ ಗೋಲು ನೀಡಿದರು. ಮತ್ತೊಂದು ಪಂದ್ಯದಲ್ಲಿ ಎಂಇಜಿ ಆ್ಯಂಡ್‌ ಸೆಂಟರ್‌ ಎಫ್‌ಸಿ ತಂಡವು ಓಜೋನ್‌ ಎಫ್‌ಸಿಯೊಡನೆ 1–1 ಗೋಲುಗಳ ಡ್ರಾ ಸಾಧಿಸಿತು. ಎಂಇಜಿ ಪರ ಶೇಖ್‌ ಮುಜೀಬ್‌ (83ನೇ ನಿಮಿಷ) ಹಾಗೂ ಓಜೋನ್‌ ತಂಡದ ಡ್ಯಾಂಗ್ನೆ ಗೈಪುಲಾನ್‌ 82ನೇ ನಿಮಿಷ ಗೋಲು ಹೊಡೆದರು. ಆಟಗಾರನ ತಲೆಗೆ ಗಾಯ:ಸೌತ್‌ ಯುನೈಟೆಡ್‌ ಎಫ್‌ಸಿ ಹಾಗೂ ಎಜಿಒಆರ್‌ಸಿ ಎಫ್‌ಸಿ ತಂಡಗಳ ನಡುವೆ ನಡೆಯುತ್ತಿದ್ದ ಪಂದ್ಯದ 78ನೇ ನಿಮಿಷದಲ್ಲಿ ಸೌತ್‌ ಯನೈಟೆಡ್‌ನ ಡೇವಿಡ್‌ ಹಾಗೂ ಎಜಿಒಆರ್‌ಸಿ ಎಫ್‌ಸಿಯ ಲೋಕಮಾನ್‌ ಸಿಂಗ್‌ ಪರಸ್ಪರ ಡಿಕ್ಕಿ ಹೊಡೆದರು. ಲೋಕಮಾನ್‌ ಸಿಂಗ್‌ಗೆ ತಲೆಗೆ ಪೆಟ್ಟು ಬಿದ್ದಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗಾಯಕ್ಕೆ ಹೊಲಿಗೆ ಹಾಕಲಾಗಿದೆ.‌ ಡೇವಿಡ್‌ ಅವರಿಗೆ ರೆಫರಿ ರೆಡ್‌ ಕಾರ್ಡ್‌ ನೀಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.