ಅಗ್ರಸ್ಥಾನಕ್ಕಾಗಿ ಬಿಎಫ್‌ಸಿ ಪೈಪೋಟಿ ಮುಂಬೈ : ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಶುಕ್ರವಾರ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಸೆಣಸಲಿವೆ. ಮುಂಬೈ ಫುಟ್‌ಬಾಲ್ ಅರೆನಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರುವ ನಿರೀಕ್ಷೆಯೊಂದಿಗೆ ಬಿಎಫ್‌ಸಿ ಕಣಕ್ಕೆ ಇಳಿಯಲಿದೆ. ಅಗ್ರ ನಾಲ್ಕರಲ್ಲಿ ಸ್ಥಾನ ಉಳಿಸಿಕೊಳ್ಳಲು ಉಭಯ ತಂಡಗಳಿಗೂ ಈ ಪಂದ್ಯದ ಜಯ ನೆರವಾಗಲಿದೆ. ಎಟಿಕೆ ಮತ್ತು ಒಡಿಶಾ ಎಫ್‌ಸಿ ವಿರುದ್ಧದ ಪಂದ್ಯಗಳಲ್ಲಿ ಗೋಲು ಗಳಿಸದೇ ಸೋಲು ಅನುಭವಿಸಿರುವ ಮುಂಬೈ ತಂಡಕ್ಕೆ ತವರಿನಲ್ಲಿ ಗೆಲ್ಲಲೇಬೇಕಾದ ಸವಾಲು ಎದುರಾಗಿದೆ. 12 ಪಂದ್ಯಗಳಿಂದ 16 ಪಾಯಿಂಟ್‌ ಗಳಿಸಿರುವ ಈ ತಂಡ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಇಷ್ಟೇ ಪಂದ್ಯಗಳನ್ನು ಆಡಿರುವ ಬಿಎಫ್‌ಸಿ 22 ಪಾಯಿಂಟ್‌ ಗಳಿಸಿ ಎರಡನೇ ಸ್ಥಾನದಲ್ಲಿದೆ. ಡಿಸೆಂಬರ್ 25ರಂದು ಕೋಲ್ಕತ್ತದಲ್ಲಿ ಎಟಿಕೆ ವಿರುದ್ಧ ಸೋತ ನಂತರ ಬಿಎಫ್‌ಸಿ ಪುಟಿದೆದ್ದು ತವರಿನಲ್ಲಿ ಗೋವಾ ಮತ್ತು ಜೆಮ್‌ಶೆಡ್‌ಪುರ ವಿರುದ್ಧ ಗೆಲುವು ಸಾಧಿಸಿತ್ತು. ಹಿಂದಿನ ಎರಡು ಪಂದ್ಯಗಳಲ್ಲಿ ಮೂರು ಗೋಲು ಗಳಿಸಿರುವ ನಾಯಕ ಸುನಿಲ್ ಚೆಟ್ರಿ ಈ ಬಾರಿ ಒಟ್ಟು ಎಂಟು ಗೋಲು ಗಳಿಸಿದ ಸಾಧನೆ ಮಾಡಿದ್ದಾರೆ. ಮಿಡ್‌ಫೀಲ್ಡರ್‌ ಎರಿಕ್ ಪಾರ್ಟಲು ಉತ್ತಮ ಲಯದಲ್ಲಿದ್ದು ಎರಡು ಬಾರಿ ಚೆಂಡನ್ನು ಗುರಿ ಮುಟ್ಟಿಸಿದ್ದಾರೆ. ನಾಲ್ಕು ಗೋಲು ಗಳಿಸಲು ನೆರವಾಗಿದ್ದಾರೆ. ದಿಮಾಸ್ ಡೆಲ್ಗಾಡೊ ಈ ಆವೃತ್ತಿಯಲ್ಲಿ ಹೆಚ್ಚು ಪಾಸ್‌ ನೀಡಿದ ಆಟಗಾರ ಎನಿಸಿದ್ದಾರೆ. ಇತ್ತೀಚೆಗೆ ತಂಡವನ್ನು ಸೇರಿಕೊಂಡಿರುವ ಡೆಸ್ಮನ್ ಬ್ರೌನ್ ಮೊದಲ ಪಂದ್ಯ ಆಡುವ ನಿರೀಕ್ಷೆ ಇದೆ. ಅವರು ಕಣಕ್ಕೆ ಇಳಿದರೆ ತಂಡದ ಆತ್ಮವಿಶ್ವಾಸ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗ ಮುಂಬೈ 3-2ರ ಗೆಲುವು ಸಾಧಿಸಿತ್ತು. ಆದ್ದರಿಂದ ಬಿಎಫ್‌ಸಿಗೆ ಸೇಡು ತೀರಿಸಿಕೊಳ್ಳುವ ಆಸೆಯೂ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.