ಮಹಿಳಾ ಫುಟ್‌ಬಾಲ್: ಗೋಕುಲಂ ಜಯಭೇರಿ ಬೆಂಗಳೂರು: ಯುಮ್ನಮ್ ಕಮಲಾ ದೇವಿ ಮತ್ತು ಸಬಿತ್ರಾ ಭಂಡಾರಿ ಹ್ಯಾಟ್ರಿಕ್ ಗೋಲುಗಳನ್ನು ಬಾರಿಸಿ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಮಿಂಚಿದರು. ಇವರಿಬ್ಬರ ಅಬ್ಬರದಿಂದ ಗೋಕುಲಂ ಕೇರಳ ಎಫ್‌ಸಿ ತಂಡ ಜಯಭೇರಿ ಮೊಳಗಿಸಿತು. ಇಂಡಿಯನ್‌ ವಿಮೆನ್ಸ್ ಲೀಗ್‌ನ ಬುಧವಾರದ ಪಂದ್ಯದಲ್ಲಿ ಗೋಕುಲಂ ಎಫ್‌ಸಿ ತಂಡ ಎಫ್‌ಸಿ ಅಲಕಾಪುರ ಹರಿಯಾಣವನ್ನು 8–1 ಗೋಲುಗಳಿಂದ ಮಣಿಸಿತು. ನಾಲ್ಕನೇ ನಿಮಿಷದಲ್ಲಿ ಕಮಲಾದೇವಿ ಮೊದಲ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಗಳಿಸಿಕೊಟ್ಟರು. 51 ಮತ್ತು 88ನೇ ನಿಮಿಷದಲ್ಲಿ ಮತ್ತೆ ಎರಡು ಬಾರಿ ಚೆಂಡನ್ನು ಗುರಿ ಮುಟ್ಟಿಸಿದರು. ಸಬಿತ್ರಾ ಭಂಡಾರಿ 13, 45 ಮತ್ತು 57ನೇ ನಿಮಿಷದಲ್ಲಿ ಗೋಲು ಗಳಿಸಿದರು. ಮಣೀಕ್ಷಾ (16ನೇ ನಿ) ಮತ್ತು ದಯಾ ದೇವಿ (35ನೇ ನಿ) ಅವರ ಗೋಲುಗಳು ಗೋಕುಲಂ ತಂಡದ ಗೇಲುವಿನ ಅಂತರವನ್ನು ಹೆಚ್ಚಿಸಿತು. ಕರೇನ್ ಪಾಯಸ್ (66ನೇ ನಿಮಿಷ) ಅಲಕಾಪುರ ತಂಡದ ಪರ ಏಕೈಕ ಗೋಲು ಗಳಿಸಿದರು. ಈ ಜಯದೊಂದಿಗೆ ಗೋಕುಲಂ ಕೇರಳ ಎಫ್‌ಸಿ ‘ಬಿ’ ಗುಂಪಿನ ಅಂತಿಮ ಸುತ್ತಿನಲ್ಲಿ ಆಡುವ ಅವಕಾಶ ಪಡೆದುಕೊಂಡಿತು. ಅಂತಿಮ ಸುತ್ತಿನ ಪಂದ್ಯಗಳು ಶುಕ್ರವಾರದಿಂದ ನಡೆಯಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.