ಐಎಸ್‌ಎಲ್‌ ಟೂರ್ನಿ: ಜಮ್‌ಶೆಡ್‌ಪುರ ವಿರುದ್ಧ ಚೆನ್ನೈಯಿನ್‌ಗೆ ಜಯ ಚೆನ್ನೈ: ಉತ್ತಮ ಲಯದಲ್ಲಿರುವ ಆಟಗಾರ ನೆರಿಯಸ್‌ ವಲ್ಸ್‌ಕಿಸ್‌ ಗಳಿಸಿದ ಎರಡು ಗೋಲುಗಳ ನೆರವಿನಿಂದ ಚೆನ್ನೈಯಿನ್‌ ಎಫ್‌ಸಿ ತಂಡ ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ ಪಂದ್ಯದಲ್ಲಿ ಗುರುವಾರ 4–1 ಗೋಲುಗಳಿಂದ ಜಮ್‌ಶೆಡ್‌ಪುರ ತಂಡವನ್ನು ಸೋಲಿಸಿತು. ಈ ಗೆಲುವಿನಿಂದ ಆರನೇ ಸ್ಥಾನಕ್ಕೇರಿದ ಚೆನ್ನೈಯಿನ್‌ ತಂಡ (18 ಪಾಯಿಂಟ್‌) ಪ್ಲೇ ಆಫ್‌ ಹಂತಕ್ಕೇರುವ ಅವಕಾಶವನ್ನು ಹಸಿರಾಗಿಟ್ಟುಕೊಂಡಿದೆ. ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿರಾಮದ ವೇಳೆ ಎರಡು ಬಾರಿಯ ಚಾಂಪಿಯನ್‌ ತಂಡ 2–0 ಗೋಲುಗಳಿಂದ ಮುಂದಿತ್ತು. ಲಿಥುವೇನಿಯಾದವರಾದ ವಲ್ಸ್‌ಕಿಸ್‌ (13, 74ನೇ ನಿಮಿಷ), ಆ್ಯಂಡ್ರೆ ಶೆಂಬ್ರಿ (42ನೇ) ಮತ್ತು ಲಾಲಿನ್‌ಜುವಾಲಾ ಚಾಂಗ್ಟೆ (87ನೇ) ಚೆನ್ನೈಯಿನ್‌ ತಂಡದ ಪರ ಸ್ಕೋರ್ ಮಾಡಿದರು. ಜಮ್‌ಶೆಡ್‌ಪುರ ಪರ ‘ಸ್ಟಾರ್‌ ಆಟಗಾರ’ ಸೆರ್ಜಿಯೊ ಕ್ಯಾಸೆಲ್‌ 71ನೇ ನಿಮಿಷ ಅಂತರ ಕಡಿಮೆ ಮಾಡಿದರು. ಜಮ್‌ಶೆಡ್‌ಪುರ 16 ಪಾಯಿಂಟ್‌ ಗಳಿಸಿ ಏಳನೇ ಸ್ಥಾನಕ್ಕೆ ಸರಿದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.