ಐಎಸ್‌ಎಲ್‌: ಪ್ರಶಸ್ತಿ ಸುತ್ತಿಗೆ ಚೆನ್ನೈಯಿನ್‌ ಮಡಗಾಂವ್‌: ಎರಡು ಬಾರಿಯ ಚಾಂಪಿಯನ್‌ ಚೆನ್ನೈಯಿನ್‌ ಎಫ್‌ಸಿ ತಂಡ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಆರನೇ ಆವೃತ್ತಿಯಲ್ಲಿ ಫೈನಲ್‌ ಪ್ರವೇಶಿಸಿದೆ. ಇಲ್ಲಿನ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೊದಲ ಸೆಮಿಫೈನಲ್‌ನ ಎರಡನೇ ಲೆಗ್‌ನ ಹೋರಾಟದಲ್ಲಿ ಚೆನ್ನೈಯಿನ್‌ 2–4 ಗೋಲು ಗಳಿಂದ ಆತಿಥೇಯ ಎಫ್‌ಸಿ ಗೋವಾ ವಿರುದ್ಧ ಸೋತಿತು. ಹೋದ ವಾರ ಚೆನ್ನೈನಲ್ಲಿ ನಡೆದಿದ್ದ ಮೊದಲ ಲೆಗ್‌ನ ಪೈಪೋಟಿಯಲ್ಲಿ 4–1 ಯಿಂದ ಜಯಿಸಿದ್ದ ಚೆನ್ನೈಯಿನ್‌ ತಂಡ ಗೋಲು ಗಳಿಕೆಯ ಸರಾಸರಿಯ (6–5) ಆಧಾರದಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿತು. ಶನಿವಾರದ ಪೈಪೋಟಿಯ ಹತ್ತನೇ ನಿಮಿಷದಲ್ಲಿ ಚೆನ್ನೈಯಿನ್‌ ತಂಡದ ಲೂಸಿಯನ್ ಗೋಯಿನ್‌ ತಮ್ಮದೇ ಗೋಲುಪೆಟ್ಟಿಗೆಯಲ್ಲಿ ಚೆಂಡನ್ನು ಒದ್ದರು. ಹೀಗಾಗಿ ಗೋವಾ ಖಾತೆಗೆ ‘ಉಡುಗೊರೆ’ ಗೋಲು ಸೇರ್ಪಡೆಯಾಯಿತು. ಮರ್ತಡಾ ಫಾಲ್‌ (21 ಮತ್ತು 83) ಹಾಗೂ ಎಡು ಬೇಡಿಯಾ ಅವರು (81) ಕಾಲ್ಚಳಕ ತೋರಿದ್ದರಿಂದ ಗೋವಾ ಪಾಳಯದಲ್ಲಿ ಗೆಲುವಿನ ಆಸೆ ಚಿಗುರೊಡೆದಿತ್ತು. ಲಾಲಿಂಜುವಾಲ ಚಾಂಗ್ಟೆ (52) ಮತ್ತು ನೆರಿಜಸ್‌ ವಾಲಸ್ಕಿಸ್‌ (59) ದಾಖಲಿಸಿದ ಗೋಲುಗಳು ಚೆನ್ನೈಯಿನ್‌ಗೆ ವರವಾದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.