ಸ್ಪೇನ್ ತಂಡಕ್ಕೆ ಸೋಲುಣಿಸಿ ಮೊರೊಕ್ಕೊ ಚಾರಿತ್ರಿಕ ಸಾಧನೆ ಅಲ್‌ ರಯಾನ್‌ (ರಾಯಿಟರ್ಸ್): ಮೊರೊಕ್ಕೊ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ ಸ್ಪೇನ್‌ ತಂಡಕ್ಕೆ ಆಘಾತ ನೀಡಿ ವಿಶ್ವಕಪ್ ಟೂರ್ನಿಯ ಎಂಟರಘಟ್ಟಕ್ಕೆ ಲಗ್ಗೆಯಿಟ್ಟಿತು. ಇದೇ ಮೊದಲ ಬಾರಿ ಕ್ವಾರ್ಟರ್‌ಫೈನಲ್ ತಲುಪಿದ ಸಾಧನೆ ಮಾಡಿತು. ಈ ಶ್ರೇಯ ಗಳಿಸಿದ ಮೊದಲ ಅರಬ್ ದೇಶ ಎಂಬ ಹಿರಿಮೆಗೂ ಪಾತ್ರವಾಯಿತು. ಇಲ್ಲಿಯ ಎಜುಕೇಶನ್ ಸಿಟಿ ಕ್ರೀಡಾಂ ಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊರೊಕ್ಕೊ 3–0ಯಿಂದ ಸ್ಪೇನ್ ತಂಡವನ್ನು ಸೋಲಿಸಿತು. ಜಿದ್ದಾಜಿದ್ದಿ ಪೈಪೋಟಿ ನಡೆದ ಪಂದ್ಯದ ನಿಗದಿತ ಮತ್ತು ಹೆಚ್ಚುವರಿ ಅವಧಿಯಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ.2010ರ ಆವೃತ್ತಿಯ ಚಾಂಪಿಯನ್‌ ಸ್ಪೇನ್‌, ಹಲವು ಅವಕಾಶಗಳನ್ನು ಸೃಷ್ಟಿಸಿಕೊಂಡರೂ ಅವುಗಳನ್ನು ಗೋಲುಗಳಲ್ಲಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಅಶ್ರಫ್ ಹಕೀಮಿ, ಹಕೀಂ ಜಿಯೆಚ್‌ ಮತ್ತು ಅಬ್ದೆಲ್ ಹಮೀದ್‌ ಅವರು ಮೊರೊಕ್ಕೊ ಪರ ಶೂಟೌಟ್‌ನಲ್ಲಿ ಯಶಸ್ಸು ಕಂಡರು. ಮೊರೊಕ್ಕೊ ಗೋಲ್‌ಕೀಪರ್ ಯಾಸಿನ್‌ ಬೌನೊ ಅವರು ಶೂಟೌಟ್‌ನಲ್ಲಿ ಎದುರಾಳಿ ತಂಡದ ಎರಡು ಗೋಲುಗಳನ್ನು ತಡೆದು ಗೆಲುವಿನಲ್ಲಿ ಮಿಂಚಿದರು. ಸ್ಪೇನ್ ತಂಡದ ಪ್ಯಾಬ್ಲೊ ಸರಾಬಿಯಾ ಒದ್ದ ಚೆಂಡು ಗೋಲುಕಂಬಕ್ಕೆ ಬಡಿದರೆ, ಕಾರ್ಲೊಸ್‌ ಸೊಲೆರ್‌, ಸೆರ್ಜಿಯೊ ಬಸ್ಕೆಟ್ಸ್ ಅವರ ಪ್ರಯತ್ನಗಳನ್ನು ಯಾಸಿನ್ ತಡೆದರು. ಎಂಟರಘಟ್ಟದಲ್ಲಿ ಮೊರೊಕ್ಕೊ ತಂಡವು ಸ್ವಿಟ್ಜರ್ಲೆಂಡ್‌ ಅಥವಾ ಪೋರ್ಚುಗಲ್ಅನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.