ಯುವೆಂಟಸ್‌ ಸೋಲು ತಪ್ಪಿಸಿದ ರೊನಾಲ್ಡೊ ಮಿಲಾನ್‌ : ಕ್ರಿಸ್ಟಿಯಾನೊ ರೊನಾಲ್ಡೊ, ಶುಕ್ರವಾರ ಯುವೆಂಟಸ್‌ ತಂಡಕ್ಕೆ ಆಪತ್ಬಾಂಧವನಾದರು. ಹೆಚ್ಚುವರಿ ಅವಧಿಯಲ್ಲಿ (ಇಂಜುರಿ) ರೊನಾಲ್ಡೊ ಗಳಿಸಿದ ಗೋಲಿನ ನೆರವಿನಿಂದ ಯುವೆಂಟಸ್‌ ತಂಡ ಎ.ಸಿ.ಮಿಲಾನ್‌ ವಿರುದ್ಧದ ಇಟಾಲಿಯನ್‌ ಕಪ್‌ ಮೊದಲ ಲೆಗ್‌ನ ಸೆಮಿಫೈನಲ್‌ನಲ್ಲಿ ಸೋಲಿನಿಂದ ಪಾರಾಯಿತು. ಸ್ಯಾನ್‌ ಸಿರೊ ಕ್ರೀಡಾಂಗಣದಲ್ಲಿ ನಡೆದ ಉಭಯ ತಂಡಗಳ ನಡುವಣ ಈ ಹಣಾಹಣಿ 1–1 ಗೋಲುಗಳಿಂದ ಸಮಬಲವಾಯಿತು. ಬಲಿಷ್ಠ ಆಟಗಾರರನ್ನು ಹೊಂದಿದ್ದ ಎರಡು ತಂಡಗಳೂ ಆರಂಭದಿಂದಲೇ ಜಿದ್ದಾಜಿದ್ದಿನಿಂದ ಸೆಣಸಿದವು. ಹೀಗಾಗಿ ಮೊದಲಾರ್ಧದ ಆಟ ಗೋಲು ರಹಿತವಾಗಿತ್ತು. ದ್ವಿತೀಯಾರ್ಧದ ಆರಂಭದಲ್ಲಿ ಮಿಲಾನ್‌ ಮೇಲುಗೈ ಸಾಧಿಸಿತು. 61ನೇ ನಿಮಿಷದಲ್ಲಿ ಈ ತಂಡದ ಆ್ಯಂಟೆ ರೆಬಿಕ್‌ ಗೋಲು ಹೊಡೆದರು. ನಿಗದಿತ ಅವಧಿಯ (90 ನಿಮಿಷ) ಆಟ ಮುಗಿದಾಗ ಮಿಲಾನ್‌ ತಂಡ 1–0 ಮುನ್ನಡೆ ಗಳಿಸಿತ್ತು. ಹೆಚ್ಚುವರಿ ಅವಧಿಯ ಶುರುವಿನಲ್ಲೇ (90+1ನೇ ನಿಮಿಷ) ಯುವೆಂಟಸ್‌ ತಂಡಕ್ಕೆ ಪೆನಾಲ್ಟಿ ಸಿಕ್ಕಿತು. ಈ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದ ರೊನಾಲ್ಡೊ ಸಂಭ್ರಮಿಸಿದರು. ಉಭಯ ತಂಡಗಳ ನಡುವಣ ಎರಡನೇ ಲೆಗ್‌ನ ಸೆಮಿಫೈನಲ್‌ ಪಂದ್ಯವು ಮಾರ್ಚ್‌ 5ರಂದು ಅಲಯನ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.