ಮಹಿಳಾ ಫುಟ್‌ಬಾಲ್‌ಗೆ ಪ್ರಾಯೋಜಕತ್ವ ಬೇಕು *ಈ ಬಾರಿಯ ಮಹಿಳಾ ಲೀಗ್‌ನಲ್ಲಿ ಗರಿಷ್ಠ (18) ಗೋಲು ಗಳಿಸಿದ ಆಟಗಾರ್ತಿ. ಲೀಗ್‌ನಲ್ಲಿ ಹ್ಯಾಟ್ರಿಕ್ ಕೂಡ ಗಳಿಸಿದ್ದೀರಿ. ಈ ಸಾಧನೆಗಳನ್ನು ಹೇಗೆ ವಿಶ್ಲೇಷಿಸುತ್ತೀರಿ? ಗರಿಷ್ಠ ಗೋಲು ದಾಖಲಿಸಿದ ಸಾಧನೆ ಮಾಡಿರುವುದು ಖುಷಿ ತಂದಿದೆ. ಅಪರೂಪದ ಆಟಗಾರ್ತಿ ಆಗಬೇಕೆಂಬ ಬಯಕೆ ಹೊತ್ತುಕೊಂಡೇ ಕಳೆದ ಬಾರಿಯೂ ಕಣಕ್ಕೆ ಇಳಿದಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಈ ಬಾರಿ ತಂಡಕ್ಕೆ ಗೆಲುವು ತಂದುಕೊಡುವುದರ ಜೊತೆಯಲ್ಲಿ ಗರಿಷ್ಠ ಸ್ಕೋರು ಮಾಡಿದ ಆಟಗಾರ್ತಿ ಆಗಲೇಬೇಕೆಂದು ಪಣ ತೊಟ್ಟಿದ್ದೆ. ಆ ಗುರಿಯನ್ನು ಸಾಧಿಸಿದ್ದೇನೆ. *ಮಹಿಳಾ ಫುಟ್‌ಬಾಲ್‌ ಲೀಗ್ ಬಗ್ಗೆ ನಿಮ್ಮ ಅನಿಸಿಕೆ ಏನು? ನಾಲ್ಕು ವರ್ಷಗಳ ಹಿಂದೆ ಈ ಲೀಗ್ ಆರಂಭಿಸುವ ಮೂಲಕ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಘನ ಕಾರ್ಯವನ್ನು ಮಾಡಿದೆ. ಲೀಗ್ ಶುರುವಾದ ನಂತರ ಮಹಿಳಾ ಫುಟ್‌ಬಾಲ್ ಹೊಸ ದಿಸೆಯಲ್ಲಿ ಹೆಜ್ಜೆ ಹಾಕಿದೆ. ಪುರುಷರ ವಿಭಾಗವೂ ಸೇರಿದಂತೆ ಭಾರತದಲ್ಲಿ ಫುಟ್‌ಬಾಲ್ ಕ್ರೀಡೆಯ ಬೆಳವಣಿಗೆಗೆ ಈ ಲೀಗ್‌ನಿಂದ ಉತ್ತಮ ಕೊಡುಗೆ ಸಿಗಲಿದೆ ಎಂಬುದು ನನ್ನ ಅನಿಸಿಕೆ. *ಮಹಿಳಾ ಲೀಗ್ ಅನ್ನು ಇಂಡಿಯನ್ ಸೂಪರ್ ಲೀಗ್ ರೀತಿ ದೊಡ್ಡ ಮಟ್ಟದಲ್ಲಿ ಬೆಳೆಸಲು ಏನು ಮಾಡಬೇಕು? ಮಹಿಳಾ ಲೀಗ್ ಕೂಡ ಎತ್ತರಕ್ಕೆ ಬೆಳೆಯಬಲ್ಲದು. ಆದರೆ ಇದಕ್ಕಾಗಿ ಸ್ವಲ್ಪ ಶ್ರಮ ಹಾಕಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕಾರ್ಪೊರೇಟ್ ಸಂಸ್ಥೆಗಳು ಪ್ರಾಯೋಜಕತ್ವ ವಹಿಸಲು ಮುಂದೆ ಬರಬೇಕು. *ನೀವು ನೇಪಾಳ ತಂಡದ ಆಟಗಾರ್ತಿ. ಭಾರತದ ಮಹಿಳಾ ಫುಟ್‌ಬಾಲ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗುವ ಭರವಸೆ ಇದೆಯಾ? ಖಂಡಿತ. ಭಾರತದಲ್ಲಿ ಮಹಿಳಾ ಫುಟ್‌ಬಾಲ್ ಉತ್ತಮ ಬೆಳವಣಿಗೆ ಕಾಣುತ್ತಿದೆ. ಇಲ್ಲಿನ ತಂಡವೂ ಬಲಿಷ್ಠವಾಗಿದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ಸವಾಲನ್ನು ಮೆಟ್ಟಿನಿಲ್ಲುವ ಸಾಮರ್ಥ್ಯ ಹೊಂದಿದೆ. *ಸುಮಾರು 20 ದಿನಗಳಿಂದ ಉದ್ಯಾನ ನಗರಿಯಲ್ಲಿದ್ದೀರಿ. ಹೇಗನಿಸಿತು? ಭಾರತದ ಅತ್ಯುತ್ತಮ ನಗರಗಳಲ್ಲಿ ಒಂದು ಬೆಂಗಳೂರು. ಮೋಹಕ ವಾತಾವರಣ, ಆಪ್ತ ಜನರು. ಹೆಚ್ಚು ಸುತ್ತಾಡಲು ಆಗಲಿಲ್ಲ. ಈಗ (ಶುಕ್ರವಾರ) ಲೀಗ್ ಮುಕ್ತಾಯ ಕಂಡಿದೆ. ಇಲ್ಲಿ ಓಡಾಡಿಯೇ ವಾಪಸ್ ಹೋಗುವುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.